ಮಂಗಳೂರು, ಅ. 10: ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ನಡೆಸಲು ಎಸ್ಐಟಿ ವಹಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಜಯಂತ್ ಟಿ, ಎಸ್ಐಟಿ ಕಚೇರಿಗೆ ಭೇಟಿ ನೀಡಿದ್ದು, ಮುಚ್ಚಿದ ಲಕೋಟೆಯೊಂದನ್ನು ನೀಡಿದ್ದಾರೆ.


ಎಸ್ಐಟಿ ಕಚೇರಿಯಲ್ಲಿ ಸುಧೀರ್ ಕುಮಾರ್ ರೆಡ್ಡಿ ಇಲ್ಲದ ಕಾರಣ, ಪೊಲೀಸ್ ಕಮಿಷನರ್ ಕಚೇರಿಗೆ ಬಂದು ಲಕೋಟೆ ನೀಡಿದ್ದಾರೆ. ಆ ಬಳಿಕ ಖಾಸಗಿ ವಾಹಿನಿ ಜೊತೆ ಮಾತನಾಡಿದ ಅವರು, ‘ಮುಚ್ಚಿದ ಲಕೋಟೆಯಲ್ಲಿ ಒಂದಿಷ್ಟು ಜನರ ಹೆಸರನ್ನು ಕೊಟ್ಟಿದ್ದೇನೆ. ಅವರಿಗೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಮಾಹಿತಿ ಇದೆ. ಅವರು ಕೂಡ ಅದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಅವರನ್ನು ಸಾಕ್ಷಿ ಅಥವಾ ಆರೋಪಿಯನ್ನಾಗಿಸಿ ವಿಚಾರಣೆ ಮಾಡಬಹುದು. ದಕ್ಷ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರ ಕಚೇರಿಗೆ ಲಕೋಟೆ ಕೊಟ್ಟು ಅವರಿಗೆ ವಿಷಯ ತಿಳಿಸಿದ್ದೇನೆ. ಅವರನ್ನೆಲ್ಲಾ ಈ ಹಿಂದೆ ಪೊಲೀಸರು, ಸಿಐಡಿ, ಸಿಬಿಐ ತನಿಖೆ ಮಾಡಿಲ್ಲ ಹಾಗಾಗಿ ಅವರ ತನಿಖೆ ಮಾಡಿದರೆ ಸತ್ಯ ಹೊರಬರುತ್ತೆ’ ಎಂದು ಹೇಳಿದ್ದಾರೆ.


