ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಮಂಗಳೂರು ನಡುವಿನ ಕರಾವಳಿ ತೀರದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಅಧಿಕೃತ ಮುನ್ನೆಚ್ಚರಿಕೆ ಸಂದೇಶ ಹೊರಡಿಸಿದೆ.
ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಸೆ. 27 ರ ಸಂಜೆ 05:30 ಗಂಟೆಯಿಂದ ಸೆ. 29 ರ ರಾತ್ರಿ 11:30 ರ ಅವಧಿಯಲ್ಲಿ ಸಮುದ್ರದಲ್ಲಿ 0.8 ರಿಂದ 1.1 ಮೀಟರ್ ಎತ್ತರದವರೆಗೆ ಅಲೆಗಳು ಏಳಬಹುದು. ಈ ಅವಧಿಯಲ್ಲಿ ಅಲೆಗಳ ಅವಧಿ ಸುಮಾರು 16.0 ರಿಂದ 18.0 ಸೆಕೆಂಡುಗಳಷ್ಟು ಇರಲಿದೆ ಎಂದು ಸಂಸ್ಥೆ ಅಂದಾಜಿಸಿದೆ.
ಈ ಹಿನ್ನೆಲೆಯಲ್ಲಿ ಕಡಲತೀರದ ತಾಣಗಳಲ್ಲಿ ಸಮುದ್ರದ ನೀರು ದಿಢೀರನೆ ದಡಕ್ಕೆ ನುಗ್ಗುವ ಭೀತಿ ಎದುರಾಗಿದೆ. ತೀರ ಪ್ರದೇಶದಲ್ಲಿ ಚಲಿಸುವ ದೋಣಿಗಳು ಮತ್ತು ದೋಣಿ ಚಾಲಕರು ಅತ್ಯಂತ ಜಾಗರೂಕತೆಯಿಂದ ಸಂಚರಿಸಬೇಕು ಎಂದು ಸೂಚಿಸಲಾಗಿದೆ. ಹಾಗೆಯೇ, ಪ್ರವಾಸಿಗರು ಮತ್ತು ಕಡಲತೀರಕ್ಕೆ ತೆರಳುವ ಸಾರ್ವಜನಿಕರು ನೀರಿಗಿಳಿಯದೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಡಳಿತ ಮಂಡಳಿ ಹಾಗೂ ಹವಾಮಾನ ಇಲಾಖೆ ತಿಳಿಸಿದೆ.





