ಪಡಂಗಡಿ: ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಪಡಂಗಡಿ 2026-27ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ ಮತ್ತು ಸವಲತ್ತು ವಿತರಣಾ ಸಮಾರಂಭವು ಪಡಂಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಲಾಡಿ ಗ್ರಾಮ ಪಂಚಾಯತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾದ ಶ್ರೀಮತಿ ದಿವ್ಯಶ್ರೀ ಇವರು ಭಾಗವಹಿಸಿ ಸರಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿ, ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಆದರ್ಶ ನಾಗರಿಕರಾಗಿ ಜೀವನ ನಡೆಸುವಂತೆ ಕರೆ ನೀಡಿದರು.
ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಇವರು ಮಾತನಾಡಿ, ವಿಶೇಷಚೇತನರು ಯಾವುದೇ ಸಮಸ್ಯೆಗಳು ಬಂದಲ್ಲಿ ನೇರವಾಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ಪಡಂಗಡಿ ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳು ಗ್ರಾಮದ ಪ್ರತಿ ನಾಗರಿಕರ, ಅದರಲ್ಲೂ ವಿಶೇಷವಾಗಿ ವಿಶೇಷಚೇತನರ ಶ್ರೇಯೋಭಿವೃದ್ದಿಗಾಗಿ ಗ್ರಾಮ ಪಂಚಾಯತ್ನಲ್ಲಿ ಲಭ್ಯವಿರುವ ಶೇ 5ರ ಅನುದಾನದಲ್ಲಿ ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಜೀವನ ನಡೆಸಲು ಸಹಕಾರ ನೀಡುತ್ತಿದ್ದು, ಇನ್ನೂ ಮುಂದೆ ಕೂಡ ಇದೇ ಮಾದರಿಯಲ್ಲಿ ಸಮಾಜದ ದುರ್ಬಲ ವರ್ಗದ ನಾಗರಿಕರ ಕಲ್ಯಾಣಕ್ಕಾಗಿ ಶ್ರಮಿಸಲು ಬದ್ದರಿರುವುದಾಗಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಜೈನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಡಂಗಡಿ ಮತ್ತು ಗರ್ಡಾಡಿ ಗ್ರಾಮಗಳ ವಿಶೇಷಚೇತನ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ವಸಂತ ಪೂಜಾರಿ, ಮಾಜಿ ಉಪಧ್ಯಕ್ಷರಾದ ಶ್ರೀಮತಿ ವಸಂತಿ, ಮಾಜಿ ಸದಸ್ಯರಾದ ರಿಚಾರ್ಡ್ ಗೋವಿಯಸ್, ಶ್ರೀ ಅಶೋಕ ಸಪಲ್ಯ ಮತ್ತು ಕು ಶಕುಂತಳ ಉಪಸ್ಥಿತರಿದ್ದರು.
ಪಡಂಗಡಿ ಗ್ರಾಮ ಪಂಚಾಯತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾದ ಕು. ದೀಕ್ಷಿತಾ ಸಭೆಗೆ ವರದಿ ಮಂಡಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನಾಡಗೀತೆಯೊದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಪುರುಷೋತ್ತಮ ಜಿ. ಸ್ವಾಗತಿಸಿ ನಿರೂಪಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ದಿವ್ಯ, ಸುನೀಲ್ , ಶ್ರೀಮತಿ ಹೊನ್ನಮ್ಮ , ಶ್ರಿಮತಿ ಗೀತಾ, ಶ್ರೀಮತಿ ಬಾಲಿಕಾ, ಸುಶಾಂತ್, ಶ್ರೀಮತಿ ವಿಮಲ ಕು. ಲೀಲಾ ಮತ್ತು ಎಂಬಿಕೆ ಶ್ರೀಮತಿ ಶಾಲಿನಿ ಉಪಸ್ಥಿತರಿದ್ದರು.



