ಚಿಕ್ಕಮಗಳೂರು, ಆ.24: ಆಗಸ್ಟ್ 26 ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಬೃಹತ್ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿದೆ. ಆದರೆ, ಈ ಕಟೌಟ್ನ ವಿಡಿಯೋವನ್ನು ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹಿನ್ನೆಲೆಯಲ್ಲಿ ಪಾಕಿಸ್ತಾನದ ಮುಜಾಹಿದ್ಗೆ ಸಂಬಂಧಿಸಿದ ದೇಶವಿರೋಧಿ ಹಾಡನ್ನು ಬಳಸಲಾಗಿದೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯದ ವಿರುದ್ಧ ಸ್ಥಳೀಯ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.


ಇನ್ಸ್ಟಾಗ್ರಾಮ್ ಪೇಜ್ ವಿರುದ್ಧ ಸೌಮೋಟೋ ಕೇಸ್!
ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಇನ್ಸ್ಟಾ ಪೇಜ್ ವಿರುದ್ಧ ನಗರ ಠಾಣೆಯಲ್ಲಿ ದೇಶವಿರೋಧಿ ಕೃತ್ಯ ಹಾಗೂ ಕೋಮು ಪ್ರಚೋದನೆ (BNS 196, 299) ಅಡಿಯಲ್ಲಿ ಸುಮೋಟೋ ಎಫ್ಐಆರ್ ದಾಖಲಾಗಿದೆ. ಈ ವಿಡಿಯೋ ಶೇರ್ ಮಾಡಿದವರನ್ನೂ ಬಂಧಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



