ವೇಣೂರು: ಜನಮನದಲ್ಲಿ ದೇಶಭಕ್ತಿಯ ಭಾವನೆಯನ್ನು ಇಮ್ಮಡಿಗೊಳಿಸುವ, ತ್ಯಾಗ-ಬಲಿದಾನಗಳ ಇತಿಹಾಸವನ್ನು ಮೆಲುಕು ಹಾಕುವ ಪವಿತ್ರ ದಿನವಾದ ಸ್ವಾತಂತ್ರ್ಯೋತ್ಸವವು ಬಜಿರೆ ಪಿಎಂಶ್ರೀ ಕೆಪಿಎಸ್ ಶಾಲೆಯಲ್ಲಿ ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು.
ದೇಶದ ೮೦ನೇ ಸ್ವಾತಂತ್ರ್ಯೋತ್ಸವದ ಈ ಸಂಭ್ರಮದಲ್ಲಿ ಶಾಲೆಯು ರಾಷ್ಟ್ರಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಾ, ಹಿರಿಯರ ಹೋರಾಟದ ಸ್ಮರಣೆಯೊಂದಿಗೆ ವಿದ್ಯಾರ್ಥಿಗಳ ಉತ್ಸಾಹಭರಿತ ಹೆಜ್ಜೆಗಳಿಗೆ ಸಾಕ್ಷಿಯಾಯಿತು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ಶಾಲಾ ಆವರಣವು ಇಂದು ದೇಶಪ್ರೇಮದ ಗೀತೆಗಳು, ಧ್ವಜವಂದನೆ ಮತ್ತು ವಿದ್ಯಾರ್ಥಿಗಳ ಸಂಭ್ರಮದ ನಗುಮುಖಗಳಿಂದ ಕಳೆಗಟ್ಟಿತ್ತು. ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದ ಈ ೮೦ನೇ ಸ್ವಾತಂತ್ರ್ಯೋತ್ಸವದ ಅದ್ದೂರಿ ಕಾರ್ಯಕ್ರಮವು ನೆರೆದಿದ್ದ ಎಲ್ಲರಲ್ಲೂ ದೇಶದ ಬಗ್ಗೆ ಅಪಾರ ಹೆಮ್ಮೆ ಮತ್ತು ಗೌರವವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಜರುಗಿದ ಈ ಅದ್ದೂರಿ ಕಾರ್ಯಕ್ರಮವು ದೇಶಪ್ರೇಮದ ದ್ಯೋತಕವಾಗಿ ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಮತ್ತು ವೀರಯೋಧರ ವೇಷಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸದಸ್ಯ ಲೋಕಯ್ಯ ಪೂಜಾರಿ ಕಂಗಿತ್ತಿಲು, ಸದಸ್ಯ ಸುನಿಲ್ ಕುಮಾರ್, ಧರ್ಮಸ್ಥಳ ಗ್ರಾ.ಯೋಜನೆಯ ಒಕ್ಕೂಟದ ಅಧ್ಯಕ್ಷ ಗಿರೀಶ್ ಕುಲಾಲ್ ಬಡೆಕ್ಕಿಲ, ಸೇವಾಪ್ರತಿನಿಧಿ ರೂಪಾ ಚಂದನ, ಎಸ್ಡಿಎಂಸಿ ಉಪಾಧ್ಯಕ್ಷ ಲೋಕೇಶ್ ಕೋರ್ಲೋಡಿ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಪೂಜಾರಿ ಕಲ್ಪನೆ, ಎಲ್ಕೆಜಿ-ಯುಕೆಜಿ ಬೆಟರ್ಮೆಂಟ್ ಕಮಿಟಿಯ ಅಧ್ಯಕ್ಷ ಜಗನ್ನಾಥ ದೇವಾಡಿಗ, ಉಪಾಧ್ಯಕ್ಷ ಹರಿಣಿ ಜೈನ್, ತಾಯಂದಿರ ಸಮಿತಿಯ ಮಂಜುಳಾ, ರಕ್ಷಿತ್ ಬಜಿರೆ, ನಮ್ಮ ಶಾಲೆ ನಮ್ಮ ಕೊಡುಗೆ ಸಮಿತಿಯ ಅರುಣ್, ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿ ಶೆಟ್ಟಿ, ಎಸ್ಡಿಎಂಸಿ ಹಾಗೂ ವಿವಿಧ ಕಮಿಟಿಗಳ ಸದಸ್ಯರು, ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಮ್ಮ ಶಾಲೆ ನಮ್ಮ ಕೊಡುಗೆ ಸಮಿತಿ ವತಿಯಿಂದ ಶಾಲೆಗೆ ಆರ್ಥಿಕ ಸಹಾಯಧನ ನೀಡಲಾಯಿತು.
ಶಾಲಾ ನಾಯಕಿ ಶ್ರೀದೇವಿ ಸೇರಿದಂತೆ ಹಲವು ಮಂದಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಅದರಲ್ಲೂ ಎಲ್ಕೆಜಿ, ಯುಕೆಜಿ ಮಕ್ಕಳು ಮಾಡಿದ ಮುಗ್ದತೆಯ ಭಾಷಣ ಎಲ್ಲರ ಗಮನಸೆಳೆಯಿತು. ಶಿಕ್ಷಕಿ ಲೀಲಾ ಸ್ವಾಗತಿಸಿದರು.



