ಬೆಳ್ತಂಗಡಿ, ಆ. 11: ಧರ್ಮಸ್ಥಳ-ಉಜಿರೆ ಮುಖ್ಯ ರಸ್ತೆಯ ನೀರಚಿಲುಮೆಯಲ್ಲಿ ಮಂಗಳವಾರ ಬೆಳಿಗ್ಗೆ ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ 30 ವರ್ಷದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.


ಮೃತನನ್ನು ಮಡಂತ್ಯಾರ್ನ ಪಾರೆಂಕಿ ಪಾಂಗಲ್ ನಿವಾಸಿ ಬಾಬು ಕುಲಾಲ್ ಅವರ ಪುತ್ರ ಸನತ್ ಎಂದು ಗುರುತಿಸಲಾಗಿದೆ.ಗಾಯಗೊಂಡ ಹಿಂಬದಿ ಸವಾರ ಬಲ್ಲಮಂಜದ ಭರತ್ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ವರದಿಗಳ ಪ್ರಕಾರ, ಸನತ್ ಮತ್ತು ಭರತ್ ಕೆಲಸದ ನಿಮಿತ್ತ ಧರ್ಮಸ್ಥಳದ ಕಡೆಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಧರ್ಮಸ್ಥಳದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ನಂತರ, ಧರ್ಮಸ್ಥಳ-ಉಜಿರೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಮಾಹಿತಿ ಪಡೆದ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯನ್ನು ತೆರವುಗೊಳಿಸಿದರು. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



