ತಿರುಚಿರಾಪಳ್ಳಿ: ತಮಿಳುನಾಡು ರಾಜ್ಯದ ಪ್ರತಿಷ್ಠಿತ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಎನ್ಐಟಿ) ಪ್ರಾಧ್ಯಾಪಕಿಯೊಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋ ಬಿಡುಗಡೆ ಮಾಡಿದ ಸುದ್ದಿ ದೇಶವ್ಯಾಪಿ ಹರಡಿಸಿದೆ. ಇಷ್ಟು ದಿನ ಗುಟ್ಟಾಗಿದ್ದ ಪ್ರಾಧ್ಯಾಪಕಿ ಮತ್ತು ಅದೇ ಸಂಸ್ಥೆಯ ಪ್ರೊಫೆಸರ್ ಲವ್ವಿ ಡವ್ವಿ ಇದೀಗ ಜಗಜ್ಜಾಹೀರಾಗಿದೆ. ಈ ಆಘಾತಕಾರಿ ಘಟನೆ ಎನ್ಐಟಿ ಶೈಕ್ಷಣಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಕ್ಕಳಿಗೆ ಶಿಕ್ಷಣ ಹೇಳಿಕೊಡುವವರೇ ಸಮಾಜದ ಮುಂದೆ ತಲೆ ತಗ್ಗಿಸುವಂತಹ ಘಟನೆ ನಡೆದಿದೆ.

ಈ ಹಿಂದಿನಂತೆ ಮುಂದೆ ತನ್ನೊಂದಿಗೆ ಲೈಂಗಿಕತೆ ಸಹಕರಿಸಬೇಕು. ತನ್ನೊಂದಿಗೆ ಸರಿಯಾಗಿರಬೇಕು ಎಂದು ಪೀಡಿಸುತ್ತಿದ್ದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಎನ್ಐಟಿ) ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಜೆರಾಲ್ಡ್ ಎಂಬುವವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತ ಜೆರಾಲ್ಡ್ ಪ್ರಾಧ್ಯಾಪಕಿ ತನ್ನೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ಫೋಟೋ, ವಿಡಿಯೋ ರೂಪದಲ್ಲಿ ಸೆರೆ ಹಿಡಿದಿದ್ದ. ಅದನ್ನು ಆಕೆಯ ಪತಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕಳುಹಿಸಿದ್ದ. ಈ ಕಾರಣಕ್ಕೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಎನ್ಐಟಿ) ಸಂತ್ರಸ್ತೆ ಸಹ ಪ್ರಾಧ್ಯಾಪಕಿ (40 ವಯಸ್ಸು) ಸಂತ್ರಸ್ತೆ ಮಹಿಳೆ ಹಾಗೂ ಬಂಧಿತ ಪ್ರೊಫೇಸರ್ ಜೆರಾಲ್ಡ್ (56 ವಯಸ್ಸು) ಕೆಲಸ ಮಾಡುತ್ತಿದ್ದರು. ಇವರಿಬ್ಬರ ಮಧ್ಯೆ 2021 ರಿಂದ ಸ್ನೇಹವಿತ್ತು. ಈ ಸ್ನೇಹ ಸಲುಗೆಯು ಲೈಂಗಿಕತೆವರೆಗೂ ತಿರುಗಿತ್ತು. ಇಬ್ಬರು ವೈಯಕ್ತಿಕ ಸಮಯ ಕಳೆದ ಅವಧಿಯಲ್ಲಿ ಜೆರಾಲ್ಡ್ ಆಕೆಯ ಖಾಸಗಿ ದೃಶ್ಯಗಳನ್ನು, ಸಂಭಾಷಣೆಗಳನ್ನು ರಹಸ್ಯವಾಗಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರ ನಡುವಿನ ಅಫೇರ್ ತುಂಬಾ ವರ್ಷ ಉಳಿಯಲಿಲ್ಲ. 2025ರಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಮಹಿಳಾ ಪ್ರಾಧ್ಯಾಪಕಿ ಜೆರಾಲ್ಡ್ನಿಂದ ದೂರ ಉಳಿಯಲು ತೀರ್ಮಾನಿಸಿದ್ದರು. ಇದು ಜೆರಾಲ್ಡ್ ನ ಆಕ್ರೋಶಕ್ಕೆ ಕಾರಣವಾಗಿತ್ತು. ಜೆರಾಲ್ಡ್ ಪದೇ ಪದೇ ಆಕೆಯೊಂದಿಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಮೊದಲಿನಂತೆ ಸಹಕರಿಸಬೇಕು. ಒಂದು ವೇಳೆ ನಿರಾಕರಿಸಿದರೆ ಖಾಸಗಿ ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಸುತ್ತಿದ್ದ ಎಂದು ಸಂತ್ರಸ್ಥೆಯಿಂದ ಪೊಲೀಸರು ಮಾಹಿತಿ ಪಡೆದಿದ್ದರು.
ಪತಿ, ವಿದ್ಯಾರ್ಥಿಗಳಿಗೆ ವಿಡಿಯೋ-ಫೋಟೋ ಸೆಂಡ್!
ಆತನ ಬೆದರಿಕೆಗೆ ಮಣಿಯದೇ ಸಹ ಪ್ರಾಧ್ಯಾಪಕಿ ದೂರ ಉಳಿದಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ಜೆರಾಲ್ಡ್ನ ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು. 2025 ರ ಡಿಸೆಂಬರ್ನಲ್ಲಿ ಸಹ ಪ್ರಾಧ್ಯಾಪಕಿಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಆಕೆಯ ಪತಿಯ ಇಮೇಲ್ ಕಳುಹಿಸಿದ್ದ. ಸಾಲದೆಂಬಂತೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಇತರ ಸಹೋದ್ಯೋಗಿಗಳಿಗೂ ಶೇರ್ ಮಾಡಿಕೊಂಡು ಆಕೆಯ ವಿರುದ್ಧ ಅಪಪ್ರಚಾರ ಮಾಡಿದ್ದ. ಇದರಿಂದ ಮನನೊಂದ ಸಂತ್ರಸ್ತೆ ಕಾಲೇಜು ಆಡಳಿತ ಮಂಡಳಿ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಆಗ ಸಂಧಾನದ ಮೂಲಕ ಪ್ರಕರಣವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿತ್ತು. ಇಷ್ಟಾದರೂ ಜೆರಾಲ್ಡ್ ವಿದ್ಯಾರ್ಥಿಗಳ ನಡುವೆ ಮಹಿಳಾ ಪ್ರಾಧ್ಯಾಪಕಿ ಕುರಿತು ಆಗಾಗ ಅವಹೇಳನಕಾರಿ ಮಾತುಗಳು ಅಡುತ್ತಿದ್ದ. ಅಗೌರವಯುತ ಮಾತುಗಳಿಂದ ಹಿಂಸಿಸುತ್ತಿದ್ದ, ಇದರಿಂದ ತನಗೆ ಮಾನಸಿಕ ಕಿರುಕುಳ ಆಗುತ್ತಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಮುಂದುವರಿದು, 2026 ಜುಲೈ 18 ರಂದು ತಿರುಚ್ಚಿ ಗ್ರಾಮಾಂತರ ಸೈಬರ್ ಕ್ರೈಂ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಇನ್ಸ್ಪೆಕ್ಟರ್ ಜಿ. ಅಂಬಿಕಾ ನೇತೃತ್ವದ ವಿಶೇಷ ಪೊಲೀಸ್ ತಂಡವು ತನಿಖೆ ನಡೆಸಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಕೇಸ್ ದಾಖಲಿಸಿಕೊಂಡಿದ್ದು, ಆರೋಪಿ ಜೆರಾಲ್ಡ್ನನ್ನು ಬಂಧಿಸಿದ್ದಾರೆ. ಶಿಕ್ಷಣ ಕಲಿಸುವ ಉನ್ನತ ಸ್ಥಾನದಲ್ಲಿದ್ದವರೇ ಹೀಗೆ ದಾರಿ ತಪ್ಪಿದ್ದು ಅವರು, ಮತ್ತವರ ಕುಟುಂಬಸ್ಥರು ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ.



