ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಎಂಟು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ, ಹಲವರಿಗೆ ಗಂಭೀರ ಗಾಯಗಳಾಗಿವೆ. ಪರವಾನಗಿ ರದ್ದಾಗಿದ್ದರೂ, ಈ ಕಾರ್ಖಾನೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತನಿಖೆಯಿಂದ ಬಯಲಾಗಿದೆ. ಸಮೀಪದಲ್ಲಿದ್ದ ಆರ್ಎಎಫ್ ಸಿಬ್ಬಂದಿಯ ತ್ವರಿತ ಕಾರ್ಯಚರಣೆಯಿಂದ ಹೆಚ್ಚಿನ ಪ್ರಾಣಹಾನಿ ತಪ್ಪಿದೆ.

ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆಗೆ ದೈತ್ಯ ಬೆಂಕಿ ಹೊತ್ತಿಕೊಂಡಿದ್ದು, ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತ ಸಂಭವಿಸಿದ ಕಾರ್ಖಾನೆಯ ಸಮೀಪದಲ್ಲೇ ಕ್ಷಿಪ್ರ ಕಾರ್ಯ ಪಡೆಯ (RAF) ಸೇನಾ ಶಿಬಿರವಿತ್ತು. ಶನಿವಾರ ಮಧ್ಯಾಹ್ನ ಭಾರಿ ಸದ್ದಿನೊಂದಿಗೆ ಸ್ಫೋಟ ಕೇಳಿಸುತ್ತಿದ್ದಂತೆ ಎಚ್ಚೆತ್ತ ಆರ್ಎಎಫ್ ಸಿಬ್ಬಂದಿ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವ ಮುನ್ನವೇ ಜೀವದ ಹಂಗು ತೊರೆದು ಸುಡುತ್ತಿದ್ದ ಕಾರ್ಖಾನೆಯೊಳಗೆ ನುಗ್ಗಿದ್ದಾರೆ. ಬೆಂಕಿಯ ಜ್ವಾಲೆಯ ನಡುವೆ ಸಿಲುಕಿದ್ದ ಹಲವಾರು ಗಾಯಗೊಂಡ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತಂದು ಆಸ್ಪತ್ರೆಗೆ ದಾಖಲಿಸುವ ಮೂಲಕ ದೊಡ್ಡ ಮಟ್ಟದ ಪ್ರಾಣಹಾನಿಯನ್ನು ತಪ್ಪಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅತ್ಯಂತ ಆಘಾತಕಾರಿ ಸತ್ಯವೊಂದು ಬಯಲಾಗಿದೆ. ದುರಂತ ಸಂಭವಿಸಿದ ಈ ಪಟಾಕಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಕಾನೂನುಬಾಹಿರವಾಗಿ ಮತ್ತು ಅಕ್ರಮವಾಗಿ ನಡೆಸಲಾಗುತ್ತಿತ್ತು.
ಜಂಟಿ ಪೊಲೀಸ್ ಆಯುಕ್ತ (JCP) ಜೈಪಾಲ್ ಸಿಂಗ್ ರಾಥೋಡ್ ಅವರ ಪ್ರಕಾರ, ಈ ಮಾರಣಾಂತಿಕ ಘಟಕವನ್ನು ಮೆಹುಲ್ ದೋಡಿಯಾ ಎಂಬಾತ ನಡೆಸುತ್ತಿದ್ದ. ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈತನ ಪಟಾಕಿ ಕಾರ್ಖಾನೆಯ ಪರವಾನಗಿಯನ್ನು ಸರ್ಕಾರ ಈಗಾಗಲೇ ರದ್ದುಗೊಳಿಸಿತ್ತು. ಆದರೂ ಈತ ಕಾನೂನಿಗೆ ಕಣ್ಣು ಮುಚ್ಚಿ, ಅಮಾಯಕ ಕಾರ್ಮಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಾ ಕದ್ದುಮುಚ್ಚಿ ಕಾರ್ಖಾನೆ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಒಳಗೆ 8 ರಿಂದ 10 ಜನ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.



