ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ನೇಮಕ
ವೇಣೂರು: ಏಕಕಾಲದಲ್ಲಿ 9 ಗುಳಿಗ ದೈವಗಳು ನರ್ತನಗೈಯ್ಯುವ ರಾಜ್ಯದಲ್ಲೇ ಅಪರೂಪದ ಧಾರ್ಮಿಕ ಕ್ಷೇತ್ರವಾಗಿರುವ ಬೆಳ್ತಂಗಡಿ ತಾಲೂಕಿನ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರವು ಬ್ರಹ್ಮಕಲಶೋತ್ಸವದ ಸಿದ್ದತೆಯಲ್ಲಿದೆ.
ಈ ಹಿಂದೆ ಕ್ಷೇತ್ರದಲ್ಲಿ 2015ರ ಫೆಬ್ರವರಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ಬ್ರಹ್ಮಕಲಶೋತ್ಸವದ ವೈಭವಕ್ಕೆ ಸಿದ್ದತೆ ನಡೆಯುತ್ತಿದೆ.
ಒಂದು ಚಿಕ್ಕಗುಡಿಯಲ್ಲಿ ದುರ್ಗಾಮಾತೆಯಲ್ಲಿ ಇಲ್ಲಿ ಆರಾಧಿಸಲಾಗುತ್ತಿತ್ತು. 2015ರಲ್ಲಿ ಕ್ಷೇತ್ರವು ಜೀರ್ಣೋದ್ಧಾರಗೊಂಡು ಕಟೀಲು ಕ್ಷೇತ್ರದ ಅಸ್ರಣ್ಣರ ಮಾರ್ಗದರ್ಶನದಲ್ಲಿ ಇಲ್ಲಿಯ ಕಟ್ಟುಕಟ್ಟಲೆಯಂತೆ ಶ್ರೀ ದೇವಿಯನ್ನು ಪುನರ್ ಪ್ರತಿಷ್ಠೆ ಮಾಡಲಾಗಿತ್ತು.
ಇದೀಗ ಕ್ಷೇತ್ರದ ಚೈತನ್ಯ ವೃದ್ಧಿಯಾಗಲು ಮತ್ತು ಕ್ಷೇತ್ರದ ಶುದ್ದೀಕರಣಕ್ಕಾಗಿ ಮತ್ತೊಮ್ಮೆ ಬ್ರಹ್ಮಕಲಶೋತ್ಸವ ನೆರವೇರಿಸಲು ಧರ್ಮದರ್ಶಿ ರಮೇಶ್ ಬರ್ಕಜೆ ಚಿಂತನೆ ನಡೆಸಿದ್ದಾರೆ. 2027ರ ಫೆಬ್ರವರಿ 19ರಂದು ಬ್ರಹ್ಮಕಲಶೋತ್ಸವ ನೆರವೇರಿಸಲು ದಿನ ನಿಗಧಿ ಪಡಿಸಲಾಗಿದೆ. ಸಮಿತಿ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಸದಾಶಿವ ಹೆಗ್ಡೆ ಅವರನ್ನು ನೇಮಿಸಲಾಗಿದೆ. ಉಳಿದಂತೆ ಪದಾಧಿಕಾರಿಗಳು ಹಾಗೂ ಸಮಿತಿಗಳ ನೇಮಕವಾಗಬೇಕಿದೆ.
ಬ್ರಹ್ಮಕಲಶೋತ್ಸವ ಸಮಿತಿ ರಚನೆಯ ಬಗ್ಗೆ ಕ್ಷೇತ್ರದಲ್ಲಿ ಜು. 5ರಂದು ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಸಮಿತಿ ಪದಾಧಿಕಾರಿಗನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಿತು. ಕ್ಷೇತ್ರದ ಗುಲಾಬಿ ಆದಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕುಕ್ಕೇಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಜನಾರ್ಧನ ಪೂಜಾರಿ, ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರು, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಗಿರೀಶ್ ಕೆ.ಎಸ್., ಪ್ರಮುಖರಾದ ಶುಭಕರ ಸಾವ್ಯ, ವಿಶ್ವನಾಥ ಪೂಜಾರಿ ದಡ್ಡಾಲ್ಪಲ್ಕೆ, ರಮಾನಂದ ಬರ್ಕಜೆ, ಹರೀಶ್ ಕುಲಾಲ್ ಪೆರ್ಮುಡ, ರಾಕೇಶ್ ಕುಮಾರ್ ಮೂಡುಕೋಡಿ, ಸತೀಶ್ ಪಿ.ಯನ್., ರತ್ನಾಕರ ನಿಟ್ಟಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸದಾಶಿವ ಹೆಗ್ಡೆ ಸ್ವಾಗತಿಸಿ, ಪುಟ್ಟಣ್ಣ ಎಂಕೆ ನಿರೂಪಿಸಿದರು.



