ಮಂಗಳೂರು: ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂ.29ರಂದು ನಸುಕಿನ 2:45 ಗಂಟೆ ವೇಳೆಗೆ ಮಂಗಳೂರಿನ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆದಿತ್ತು.
ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 16 ಆರೋಪಿಗಳ ಪೈಕಿ ಸದ್ಯ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪರಿಯಾಡ್ ಮೂಲದ ನಿಮಿಲ್ ಆರ್.ಕೆ (37 ವ), ಮಡಿಕೇರಿಯ ಇರ್ಷಾದ್ (40 ವ), ಮಡಿಕೇರಿಯ ಮುಸ್ತಾಫ (49 ವ) ಎಂದು ಗುರುತಿಸಲಾಗಿದೆ.
ಜೂ.29ರಂದು ಬೆಳಗಿನ ಜಾವ ವಿಕಾಸ್ ಸುಬ್ಬರಾವ್ ಧನವಡೆ (44 ವರ್ಷ) ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ-66 ಮೂಲಕ ಬರುತ್ತಿದ್ದ ವೇಳೆ, ಮಂಗಳೂರಿನ ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಜನ ಮುಸುಕುಧಾರಿಗಳು ಕಾರನ್ನು ಅಡ್ಡಗಟ್ಟಿದ್ದರು. ವಿಕಾಸ್ ಅವರಿಗೆ ತಲವಾರು ತೋರಿಸಿ ಬೆದರಿಸಿ ಮೇಲೆ ಹಲ್ಲೆ ನಡೆಸಿ, ಪತ್ನಿ ಹಾಗೂ ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು ಹೋಗಿದ್ದರು.
ಈ ವೇಳೆ ಕಾರಿನೊಳಗೆ ಬ್ಯಾಗಿನಲ್ಲಿರಿಸಿದ್ದ ಸುಮಾರು 180ಗ್ರಾಂ ಚಿನ್ನಾಭರಣಗಳು (ಅಂದಾಜು ಮೌಲ್ಯ ರೂ.20 ಲಕ್ಷ), ಎರಡು ಮೊಬೈಲ್ ಫೋನ್ಗಳು (ರೂ.10,000) ಹಾಗೂ ಕಾರು (ಅಂದಾಜು ರೂ.3 ಲಕ್ಷ) ಸೇರಿದಂತೆ ಒಟ್ಟು 23,10,000 ಮೌಲ್ಯದ ದರೋಡೆ ಮಾಡಿಕೊಂಡ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



