ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ತಿರುಗಾಟ ಪ್ರಾರಂಭಗೊಂಡಿದೆ. ಆದ್ದರಿಂದ ಮೇಳದ ಪ್ರಥಮ ಪ್ರದರ್ಶನ ಕಟೀಲು ಕ್ಷೇತ್ರದ ರಥಬೀದಿಯ ಸರಸ್ವತಿ ಸದನದಲ್ಲಿ ರವಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಕಟೀಲು ಮೇಳದ ಈ ಬಾರಿಯ ವಿಶೇಷ ನೂತನವಾಗಿ ಏಳನೇ ಮೇಳ ಸೇರ್ಪಡೆ. ಒಂದು ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ಎಲ್ಲೆಡೆ ಕಾಣುತ್ತಿರುತ್ತೇವೆ. ಆದರೆ ಏಳು ರಂಗಸ್ಥಳ, ಏಳೂ ರಂಗಸ್ಥಳದಲ್ಲಿ ಹಿಮ್ಮೇಳ, ಮುಮ್ಮೇಳ ಕಲಾವಿದರನ್ನು ಕಾಣಲು ಸಿಗುವುದು ಅಪೂರ್ವ. ಆದ್ದರಿಂದ ಮೇಳಗಳ ತಿರುಗಾಟ ಆರಂಭದ ಪ್ರಥಮ ಪ್ರದರ್ಶನ ಏಳೂ ಮೇಳಗಳು ಜೊತೆಯಾಗಿ ನಡೆಸಿಕೊಟ್ಟಿತು.
ಯಕ್ಷಗಾನ ತಿರುಗಾಟ ಆರಂಭ
ಯಕ್ಷಗಾನ ತಿರುಗಾಟ ಆರಂಭದ ಹಿನ್ನೆಲೆಯಲ್ಲಿ ಕಲಾವಿದರು ಶ್ರೀದೇವಿಯ ಸಮ್ಮುಖದಲ್ಲಿ ಗಜ್ಜೆಕಟ್ಟಿ ಕುಣಿದರು. ಬಳಿಕ ಕಲಾವಿದರು ದೇವಸ್ಥಾನದ ರಥಬೀದಿಯಲ್ಲಿ ಹಾಕಲಾಗಿದ್ದ ಏಳೂ ರಂಗಸ್ಥಳಗಳಲ್ಲಿ ಪೂರ್ವರಂಗ ಕುಣಿತವನ್ನು ಪ್ರದರ್ಶಿಸಿದರು. ತಿರುಗಾಟದ ಪ್ರಥಮ ಪ್ರದರ್ಶನವಾಗಿ ವಾಡಿಕೆಯಂತೆ ಏಳೂ ಮೇಳದ ಕಲಾವಿದರು ಜೊತೆಯಾಗಿ ‘ಪಾಂಡವಾಶ್ವಮೇಧ’ ಪ್ರಸಂಗವನ್ನು ಪ್ರದರ್ಶಿಸಿದರು. ಇಂದಿನಿಂದ ಏಳೂ ಮೇಳಗಳು ಕರಾವಳಿಯ ವಿವಿಧ ಕಡೆಗಳಲ್ಲಿ ತಿರುಗಾಟವನ್ನು ಆರಂಭಿಸುತ್ತದೆ. ಮುಂದಿನ ಆರು ತಿಂಗಳ ಕಾಲ ವಿವಿಧ ಕಡೆಗಳಲ್ಲಿ ಯಕ್ಷಗಾನ ಹರಕೆ ಸೇವೆ ಸಲ್ಲಿಕೆಯಾಗುತ್ತದೆ.
ಸಾಕ್ಷಾತ್ ದೇವಿಯೇ ಯಕ್ಷಗಾನ ನೋಡುತ್ತಾಳೆ
ಕಟೀಲು ಮೇಳದ ಯಕ್ಷಗಾನ ಪ್ರದರ್ಶನವೆಂದರೆ ಕರಾವಳಿಗರಲ್ಲಿ ಭಕ್ತಿಭಾವ ಪರವಶತೆ ಸ್ವಲ್ಪ ಅಧಿಕವೇ. ಕಟೀಲು ಮೇಳದ ಯಕ್ಷಗಾನ ಎಲ್ಲೇ ಪ್ರದರ್ಶನವಾಗಲಿ, ಅಲ್ಲಿಗೆ ಸಾಕ್ಷಾತ್ ದೇವಿಯೇ ಬಂದು ಯಕ್ಷಗಾನ ನೋಡುತ್ತಾಳೆ ಎಂಬ ನಂಬಿಕೆಯಿದೆ. ಏಕೆಂದರೆ ಕಟೀಲು ದುರ್ಗೆಯು ಯಕ್ಷಗಾನ ಪ್ರಿಯೆ.





