ಮಹಿಳೆಯೊಬ್ಬರು ಅತ್ತೆ-ಮಾವನ ವಿರುದ್ಧ ಹೂಡಿದ್ದ ಕೌಟುಂಬಿಕ ಕ್ರೌರ್ಯ, ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಬೇಡಿಕೆ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನಿರ್ದಿಷ್ಟ ಬಹಿರಂಗ ಕೃತ್ಯಗಳಿಲ್ಲದೆ, ಸಾಮಾನ್ಯ ಆರೋಪಗಳನ್ನು ಹೊರಿಸುವ ಮೂಲಕ ವೈವಾಹಿಕ ವಿವಾದಗಳಲ್ಲಿ ಗಂಡನ ಸಂಬಂಧಿಕರ ವಿರುದ್ಧ ಮೊಕದ್ದಮೆ ಹಾಕುವುದನ್ನು ಸಮರ್ಥಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ನೊಂಗ್ಮೇಕಪಮ್ ಕೋಟೀಶ್ವರ್ ಸಿಂಗ್ ಅವರ ಪೀಠವು ದೂರುದಾರರ ಅತ್ತೆ-ಮಾವ ಸಲ್ಲಿಸಿದ ಮೇಲ್ಮನವಿಗಳನ್ನು ಅಂಗೀಕರಿಸಿತು. ಈ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ನ ಗ್ವಾಲಿಯರ್ ಪೀಠವು ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಅತ್ತೆ ಮಾನವ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಗ್ವಾಲಿಯರ್ ಪೀಠ ತಳ್ಳಿ ಹಾಕಿತ್ತು. ಇದೀಗ ಸುಪ್ರೀಂ ಕೋರ್ಟ್ ಇವರಿಬ್ಬರ ವಿಚಾರಣೆಗೆ ತಡೆ ನೀಡಿದೆ. ಕಾನೂನುಬದ್ಧವಾಗಿ ಸಮರ್ಥನೀಯ ಆರೋಪಗಳಿಲ್ಲದೆ, ವೈಯಕ್ತಿಕ ಅಥವಾ ಕೌಟುಂಬಿಕ ಕುಂದುಕೊರತೆಗಳನ್ನು ಇತ್ಯರ್ಥಪಡಿಸಲು ಕ್ರಿಮಿನಲ್ ಕಾನೂನನ್ನು ಅಸ್ತ್ರವಾಗಿ ಬಳಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.





