ಮಂಗಳೂರು, ಮೇ. 26: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು ತಿಂಗಳುಗಳಿಂದ ಕೋಮಾದಲ್ಲಿದ್ದ ಕಿನ್ನಿಗೋಳಿಯ ಯುವತಿಯೊಬ್ಬರು ಮೇ 24 ರಂದು ನಿಧನರಾಗಿದ್ದಾರೆ.
ಮೃತರನ್ನು ಪುನರೂರಿನ ವಾಸುದೇವ ಅಗ್ರಹಾರ ನಿವಾಸಿ ಶ್ರೀಲತಾ ತಂತ್ರಿ (26) ಎಂದು ಗುರುತಿಸಲಾಗಿದೆ. ಇವರು ಭರತನಾಟ್ಯ ಹಾಗೂ ಯಕ್ಷಗಾನ ಕಲಾವಿದೆಯಾಗಿದ್ದು, ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದರು .ದುಬೈನಲ್ಲಿ ಉದ್ಯೋಗದಲ್ಲಿದ್ದ ಶ್ರೀಲತಾ ಅವರು ಕಳೆದ ವರ್ಷ ನವೆಂಬರ್ನಲ್ಲಿ ಅಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು. ಪ್ರಾರಂಭದಲ್ಲಿ ಅವರಿಗೆ ದುಬೈನಲ್ಲೇ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅವಿವಾಹಿತರಾಗಿದ್ದ ಶ್ರೀಲತಾ ಅವರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.





