ಪೊಸರಡ್ಕ ಕ್ಷೇತ್ರದ ಅಭಿವೃದ್ಧಿಯಿಂದ ಸೀಮೆಯ ಗೌರವ ಹೆಚ್ಚಾಗಿದೆ: ಡಾ. ಪದ್ಮಪ್ರಸಾದ ಅಜಿಲರು
ಮರೋಡಿ: ಅಜೀರ್ಣವಸ್ಥೆಯಲ್ಲಿದ್ದ ಪೊಸರಡ್ಕ ಕ್ಷೇತ್ರ ಇಂದು ಅಭಿವೃದ್ಧಿ ಕಂಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ಊರ ಜನರು ಕಷ್ಟಪಟ್ಟು ನಂಬಿಕೆಯಿಂದ ಕ್ಷೇತ್ರವನ್ನು ಬೆಳಗಿಸಿದ್ದು, ಸೀಮೆಗೆ ಗೌರವ ತಂದಿದೆ. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ ದಾನಿಗಳನ್ನು, ಕರಸೇವಕರನ್ನು ಪರಿವಾರ ಶಕ್ತಿಗಳು ಅನುಗ್ರಹಿಸಲಿ, ಕ್ಷೇತ್ರ ಇನ್ನಷ್ಟು ಬೆಳಗಲಿ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಹೇಳಿದರು.
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪೊಸರಡ್ಕ ಶ್ರೀ ದೈವ, ಶ್ರೀ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕುಂಭಾಭಿಷೇಕ ಸಂಭ್ರಮದ ಮೊದಲ ದಿನದ ಧಾರ್ಮಿಕಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅತೀ ಕಡಿಮೆ ಅವಧಿಯಲ್ಲಿ ಅಭಿವೃದ್ಧಿ ಕಂಡ ಕ್ಷೇತ್ರ ಇದಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಕ್ಷೇತ್ರ ಹೇಗೆ ಬೆಳಗುತ್ತದೆ ಅನ್ನುವುದಕ್ಕೆ ಪೊಸರಡ್ಕ ಕ್ಷೇತ್ರ ಸಾಕ್ಷಿಯಾಗಿದೆ ಎಂದರು.
ಮರೋಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ಮಾತನಾಡಿ, ಸೀಮೆಯ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯ ಬಳಿಕ ಪೊಸರಡ್ಕ ಕ್ಷೇತ್ರ ಬೆಳಗಿದ್ದು, ಇಲ್ಲಿಯ ದೈವಸ್ಥಾನ ಮತ್ತು ಗರಡಿಯೂ ಅರಸರ ಮಾರ್ಗದರ್ಶನದಲ್ಲಿ ಬಹಳ ಅಂದವಾಗಿ ಮೂಡಿಬಂದಿದೆ. ಸಮಿತಿಯ ಚಿಂತನೆಗೆ ನಾವು ಸ್ಪಂದಿಸಿದಾಗ ಕ್ಷೇತ್ರ ಹೇಗೆ ಅಭಿವೃದ್ಧಿ ಕಾಣುತ್ತದೆ ಅನ್ನುವುದಕ್ಕೆ ಪೊಸರಡ್ಕ ಕ್ಷೇತ್ರ ಸಾಕ್ಷಿಯಾಗಿದೆ. ಬ್ರಹ್ಮಕುಂಭಾಭಿಷೇಕದ ಬಳಿಕವೂ ಊರಿನ ಜನ ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಲಿ, ಕ್ಷೇತ್ರ ಇನ್ನಷ್ಟು ಬೆಳಗಲಿ, ಊರು ಸುಭೀಕ್ಷೆ ಆಗಲಿ ಎಂದರು.
ಮಂಗಳೂರು ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಅವರು ಧಾರ್ಮಿಕ ಉಪನ್ಯಾಸ ನೀಡಿ, ಭಕ್ತಿ-ಭಾವ, ಶಿಸ್ತು, ಸಮರ್ಪಣಾ ಭಾವ, ಸರಳತೆ ಪೊಸರಡ್ಕ ಜನತೆಯಲ್ಲಿ ಕಾಣುತ್ತಿದೆ. ಕಾಡಿನ ಮಧ್ಯದಲ್ಲಿರುವ ಈ ಕ್ಷೇತ್ರದಲ್ಲಿ ದೈವೀಶಕ್ತಿ ಹೆಚ್ಚಿರುತ್ತದೆ. ದೈವಸ್ಥಾನದ ಅಭಿವೃದ್ಧಿಗೆ ನಾವೆಲ್ಲ ಮಾಧ್ಯಮವಷ್ಟೇ ಆಗಿದ್ದು, ಪರಿವಾರ ಶಕ್ತಿಗಳ ಇಚ್ಚೆಯಂತೆ ಕ್ಷೇತ್ರ ಬೆಳಗಿದೆ. ಮುಗ್ದತೆ, ಪ್ರೀತಿ, ಸರಳತೆ, ಧರ್ಮ ಹಳ್ಳಿಯಲ್ಲಿ ಮಾತ್ರ ಸಿಗಲು ಸಾಧ್ಯ. ವೈವಿಧ್ಯತೆ ಅನ್ನುವುದು ಭಗವಂತನ ಸೃಷ್ಟಿ. ಅದು ಸಹಜ. ಬಿನ್ನತೆ ದೈವ ನಿಯಮಕ್ಕೆ ವಿರೋಧವಾದದ್ದು. ಭಿನ್ನ ಭಿನ್ನ ಆಗಿರುವ ನಾವು ಒಗ್ಗಟ್ಟಾಗಬೇಕು. ಅದು ಇಂತಹ ಪುಣ್ಯ ಕಾರ್ಯಗಳಿಂದ ಸಾಧ್ಯ. ಮನೆಯಿಂದಲೇ ಧಾರ್ಮಿಕ ಭಾವನೆ ಉದ್ದೀಪನವಾಗಬೇಕು, ಅದಕ್ಕೆ ಮೊದಲು ಮನೆಯೇ ದೇವಾಲಯ ಆಗಬೇಕು. ಮನೆಯಲ್ಲಿ ನಡವಳಿಕೆ ಉತ್ತಮವಾಗಬೇಕು. ಅಡುಗೆ ಕೋಣೆಯನ್ನು ಜಗಳದ ಕೋಣೆಯಾಗಿ ಮಾಡಬೇಡಿ ಎಂದು ಸ್ತ್ರೀಯರಿಗೆ ಅವರು ಸಲಹೆ ನೀಡಿದರು. ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ ಭಕ್ತರನ್ನು ಹಾಗೂ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಸಹಕಾರ ನೀಡಿದವರನ್ನು ಅಭಿನಂದಿಸಿದರು.
ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಪಿ.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು ಮೂರು ದಶಕಗಳ ಬಳಿಕ ಕ್ಷೇತ್ರದ ಜೀರ್ಣೋದ್ಧಾರದ ಯೋಗ ಕೂಡಿ ಬಂದಿದೆ. ಇದು ಸಾಮಾನ್ಯ ಕ್ಷೇತ್ರ ಅಲ್ಲ. ಅತ್ಯಂತ ಇತಿಹಾಸ ಮತ್ತು ಕಲೆ ಕಾರಣಿಕದ ಕ್ಷೇತ್ರ ಇದಾಗಿದ್ದು, ಕೇವಲ ೩ ತಿಂಗಳಲ್ಲಿ ಜೀರ್ಣೋದ್ಧಾರ ಆಗಬೇಕೆಂಬ ತೆಗೆದುಕೊಂಡ ನಿರ್ಧಾರ ಆಗಿದೆ. ದಾನಿಗಳಿ ಭಕ್ತರು ಶಕ್ತಿಮೀರಿ ಸಹಕಾರ ನೀಡಿದ್ದಾರೆ ಎಂದರು.
ನಾರಾವಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಆಡಳಿತ ಸಮಿತಿ ಗೌರವಾಧ್ಯಕ್ಷ ರಾಜೇಂದ್ರ ಬಳ್ಳಾಲ್, ಆಡಳಿತ ಸಮಿತಿ ಸದಸ್ಯ ಸುದರ್ಶನ ಜೈನ್ ಪಾಂಡಿಬೆಟ್ಟುಗುತ್ತು, ವಿಜಯಕುಮಾರ್ ಬಂಗ, ರವೀಂದ್ರ ಹೆಗ್ಡೆ ಮರೋಡಿ, ಸತೀಶ್ ಪೂಜಾರಿ ಪೊಸರಡ್ಕ, ನಾರಾಯಣ ಪೂಜಾರಿ ದೋಟ ವೇಣೂರು, ಆಡಳಿತ ಸಮಿತಿ ಸದಸ್ಯ ರವೀಂದ್ರ ಪೂಜಾರಿ, ರಮೇಶ ಬಲಂತ್ಯರೊಟ್ಟು, ಯುವರಾಜ ಜೈನ್ ನಾರಾವಿ, ಯೋಗೀಶ್ ಪೂಜಾರಿ ನಾರಾವಿ, ಗೋಪಾಲ ಶೇರಿಗಾರ ಮರೋಡಿ, ಹರಿಣಿ ಕರುಣಾಕರ ಪೂಜಾರಿ ಮರೋಡಿ, ದಿನೇಶ್ ಬುಣ್ಣನ್ ಮರೋಡಿ, ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್. ಪೂಜಾರಿ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಆಡಳಿತ ಸಮಿತಿ ಗೌರವಾಧ್ಯಕ್ಷ ಹೇಮರಾಜ್ ಕೆ. ಬೆಳ್ಳಿಬೀಡು ಸ್ವಾಗತಿಸಿ, ಬ್ರಹ್ಮಕುಂಭಾಭಿಷೇಕ ಸಮಿತಿ ಪ್ರ. ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್ ವಂದಿಸಿದರು. ಕು. ಕೀರ್ತಿ ಆಚಾರ್ಯ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಕು. ಧನ್ವಿತಾ ಹೆಗ್ಡೆ ಮತ್ತು ಬಳಗ ಪ್ರಾರ್ಥಿಸಿದರು. ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ಲಕುಮಿ ತಂಡದ ಕಲಾವಿದರಿಂದ ಆಂಟಿ ಬೊಕ್ಕ ಅಂಕಲ್ ಎಂಬ ತುಳು ಹಾಸ್ಯಮಯ ನಾಟಕ ಜರಗಿತು.
ಸನ್ಮಾನ
ಸೀಮೆಯ ಅರಸರಾದ ಡಾ. ಪದ್ಮಪ್ರಸಾದ ಅಜಿಲರು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ವಿಜಯ ಕುಮಾರ್ ಬಂಗ, ರವೀಂದ್ರ ಹೆಗ್ಡೆ ಮರೋಡಿ, ಸತೀಶ್ ಪೊಸರಡ್ಕ, ಜಯ ವಿಕ್ರಮ ಕಲ್ಲಾಪು, ಯುವರಾಜ್ ಜೈನ್ ನಾರಾವಿ, ಗೋಪಾಲ ಶೇರಿಗಾರ ಮರೋಡಿ, ಹರಿಣಿ ಕರುಣಾಕರ ಪೂಜಾರಿ, ನಾರಾಯಣ ಪೂಜಾರಿ ದೋಟ ಅವರನ್ನು ಸನ್ಮಾನಿಸಲಾಯಿತು.
ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆಯುದ್ದಕ್ಕೂ ದಸರಾ ಮಾದರಿಯಲ್ಲಿ ಅಳವಡಿಸಿದ ವಿದ್ಯುತ್ ದೀಪಗಳು ಹಾಗೂ ಕ್ಷೇತ್ರದ ಪರಿಸರದಲ್ಲಿ ಅಳವಡಿಸಿದ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರಗಳು ಕಾರ್ಯಕ್ರಮದ ಸಂಭ್ರಮವನ್ನು ಇಮ್ಮಡಿಗೊಳಿಸಿವೆ.
ನಾಳೆ ಬ್ರಹ್ಮಕುಂಭಾಭಿಷೇಕ-ನೇಮೋತ್ಸವ
ಎ. ೩೦ರ ಬೆಳಿಗ್ಗೆ ೯ ಗಂಟೆಯಿಂದ ತರಿಕಲಶ ಅಭಿಷೇಕ ಬಳಿಕ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಸಂಜೆ ವಿವಿಧ ಕಡೆಗಳಿಂದ ಪರಿವಾರ ದೈವಗಳ ಭಂಡಾರದ ಆಗಮನವಾಗಲಿದೆ. ಬೆಳಿಗ್ಗೆ ೧೧-೩೦ರಿಂದ ಧಾರ್ಮಿಕಸಭೆ ನಡೆಯಲಿದ್ದು, ಸಮಿತಿಯಗೌರವಾಧ್ಯಕ್ಷ ಹೇಮರಾಜ ಕೆ. ಬೆಳ್ಳಿಬೀಡು ಅಧ್ಯಕ್ಷತೆ ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ದೀಪ ಪ್ರಜ್ವಲನೆ ಮಾಡಲಿದ್ದು, ಪ್ರತಾಪ್ಸಿಂಹ ನಾಯಕ್, ನಳಿನ್ ಕುಮಾರ್ ಕಟೀಲ್, ಕೆ. ಅಭಯಚಂದ್ರ ಜೈನ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಿದ್ದಾರೆ.
ನೇಮೋತ್ಸವ
ರಾತ್ರಿ ೭-೩೦ರಿಂದ ಶ್ರೀ ದೈವದ ನೇಮೋತ್ಸವ, ಬಳಿಕ ಶ್ರೀ ಕೊಡಮಣಿತ್ತಾಯ ಹಾಗೂ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.





