ಮೈಸೂರು, ಏ.12: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಇದೀಗ ಈ ಸುದ್ದಿ ಎಲ್ಲ ಕಡೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಬಸ್ಸಿಗಾಗಿ ಕಾಯುತ್ತಿದ್ದ ಯುವಕನೋರ್ವನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ಹಣದ ದಂಧೆ ಹಾಗೂ ಸೆಕ್ಸ್ ವರ್ಕ್ಗೆ ಬಳಸಿಕೊಂಡಿರುವ ಆಘಾತಕಾರಿ ಆರೋಪವೊಂದು ಕೇಳಿ ಬಂದಿದೆ. ನಂಜನಗೂಡಿನ ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ ಈ ಕರಾಳ ದಂಧೆಯ ಬಲಿಪಶುವಾಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಪ್ರಕರಣ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್ಗೆ ಮಂಗಳಮುಖಿ ಅನಿತಾ ಮತ್ತು ತಂಡ ಪರಿಚಯವಾಗಿತ್ತು. ನಂತರ ಆತನನ್ನು ಬಲವಂತವಾಗಿ ಅಪಹರಿಸಿದ ತಂಡ ಮಂಗಳೂರಿಗೆ ಕರೆದೊಯ್ದಿತ್ತು. ಅಲ್ಲಿ ಆತನಿಗೆ ಬಲವಂತವಾಗಿ ಸೀರೆ, ನೈಟಿ ತೊಡಿಸಿ, ಕಿವಿ ಓಲೆ, ಮೂಗುಬಟ್ಟು ಹಾಕಿಸಿ ‘ಅಕ್ಷತಾ’ ಎಂದು ಹೆಸರಿಟ್ಟು ಮಂಗಳಮುಖಿಯಾಗಿ ವೇಷ ಬದಲಿಸಿದ್ದರು ಎಂದು ಆರೋಪಿಸಲಾಗಿದೆ.
ಯುವಕ ಅನಿಲ್ನನ್ನು ಬೀದಿಗಳಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿ ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್ಗೆ ಬಳಸಿಕೊಂಡಿದ್ದಾರೆ ಎಂದು ಅನಿಲ್ ದೂರಿನಲ್ಲಿ ಆರೋಪಿಸಿದ್ದಾರೆ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳಮುಖಿ ಎಂದು ಸರ್ಟಿಫಿಕೇಟ್ ಕೊಡಿಸಲಾಗಿದೆ. ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಲಿಂಗ ಬದಲಾವಣೆ ಮಾಡಲು ಈ ತಂಡ ಸ್ಕೆಚ್ ಹಾಕಿತ್ತು ಎನ್ನಲಾಗಿದೆ.
ನಂತರ ಇದರಿಂದ ನೊಂದು ಇವರ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿದ ಅನಿಲ್, ತಾನು ದುಡಿದ 3 ಲಕ್ಷ ರೂಪಾಯಿ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದಾಳೆ. ತನ್ನ ಮನೆಯಿಂದ 5 ಲಕ್ಷ ರೂಪಾಯಿ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿದರೆ, ಅಲ್ಲಿಗೂ ಮಂಗಳಮುಖಿಯರನ್ನು ಕಳಿಸಿ ದಂಧೆಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಅನಿಲ್ ಅಳಲು ತೋಡಿಕೊಂಡಿದ್ದಾರೆ. ಸುಮಾರು ಶೇ. 90ರಷ್ಟು ದೃಷ್ಟಿ ದೋಷ ಹೊಂದಿರುವ ಅನಿಲ್ ಕುಮಾರ್, ನಂಜನಗೂಡು ಪೊಲೀಸರು ಸ್ಪಂದಿಸದ ಹಿನ್ನೆಲೆಯಲ್ಲಿ ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.





