ಮಂಗಳೂರು, ಮಾ.26: ತುಳುನಾಡಿನ ದೈವಾರಾಧನೆ ಎಂಬುದು ಕೇವಲ ಆಚರಣೆಯಲ್ಲ, ಅದೊಂದು ಅಪಾರ ನಂಬಿಕೆ ಮತ್ತು ಶಿಸ್ತಿನ ಪದ್ಧತಿ. ಇತ್ತೀಚೆಗೆ ದೈವದ ನೇಮೋತ್ಸವಗಳ ವೇಳೆ ಜನ ಮೊಬೈಲ್ಗಳಲ್ಲಿ ವಿಡಿಯೋ ಮಾಡುವ ಮತ್ತು ಫೋಟೋ ತೆಗೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ದೈವದ ಅವಕೃಪೆಗೆ ಕಾರಣವಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@ಛಿhಚಿsiಟಿg_ಡಿoಚಿಜss ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೇಮೋತ್ಸವ ನಡೆಯುತ್ತಿದ್ದಾಗ ದೈವವು ಹಠಾತ್ತಾಗಿ ಮೊಬೈಲ್ಗಳಲ್ಲಿ ವಿಡಿಯೋ ಮಾಡುತ್ತಿದ್ದವರತ್ತ ತಿರುಗಿ ತೀವ್ರ ಆಕ್ರೋಶದಿಂದ ಎಚ್ಚರಿಕೆ ನೀಡಿದೆ. ವಿಡಿಯೋ ಹಂಚಿಕೊಂಡಿರುವ ಮಹಿಳೆಯ ಪ್ರಕಾರ, ಕೇವಲ ವಿಡಿಯೋ ಮಾಡಿದ್ದಕ್ಕೆ ಮಾತ್ರವಲ್ಲದೆ, ತಾನು ಕೆಂಪು ಬಣ್ಣದ ಬಟ್ಟೆ ಧರಿಸಿದ್ದಕ್ಕೂ ದೈವವು ಕೋಪಗೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ದೈವದ ಆವೇಶ ಮತ್ತು ಆಕ್ರೋಶ ಕಂಡು ನೆರೆದಿದ್ದ ಭಕ್ತರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಕರಾವಳಿಯ ದೈವಗಳ ಮುಂದೆ ನಿಲ್ಲುವಾಗ ಬಟ್ಟೆ, ನಡವಳಿಕೆ ಮತ್ತು ಮೌನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳನ್ನು ದೈವದ ಹತ್ತಿರ ಹಿಡಿದು ವೀಡಿಯೋ ಮಾಡುವ ರೀಲ್ಸ್ ಸಂಸ್ಕೃತಿಯು ಈ ಪವಿತ್ರ ಸಂಪ್ರದಾಯದ ಗಂಭೀರತೆಯನ್ನು ಹಾಳುಮಾಡುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.





