ಬೆಂಗಳೂರು: ರಾಜ್ಯದ ಮನೆಮಾತಾಗಿರುವ “ನಂದಿನಿ” ತುಪ್ಪದ ಹೆಸರಿನಲ್ಲಿ ನಡೆಯುತ್ತಿದ್ದ ನಕಲಿ ಜಾಲಕ್ಕೆ ಬ್ರೇಕ್ ಹಾಕಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಈಗ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದೆ. ಇನ್ನು ಮುಂದೆ ನೀವು ಖರೀದಿಸುವ ಪ್ರತಿ ನಂದಿನಿ ತುಪ್ಪದ ಪ್ಯಾಕೆಟ್ ಅಥವಾ ಬಾಟಲಿಯ ನಕಲಿಯೋ ಅಸಲಿಯೋ ಎನ್ನುವುದನ್ನು ನಿಮ್ಮ ಮೊಬೈಲ್ ಮೂಲಕವೇ ಕ್ಷಣಾರ್ಧದಲ್ಲಿ ಪತ್ತೆ ಹಚ್ಚಬಹುದು. ಇದಕ್ಕಾಗಿ ಹೊಸ ಕ್ಯುಆರ್ ಕೋಡ್ ಅನ್ನು ಪರಿಚಯಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲೂ ನಕಲಿ ನಂದಿನಿ ತುಪ್ಪ ಮಾರಾಟವಾಗುತ್ತಿರುವ ದೂರುಗಳು ಹೆಚ್ಚಾಗಿದ್ದವು. ಇದು ಕೇವಲ ಗ್ರಾಹಕರ ಆರೋಗ್ಯಕ್ಕೆ ಸಂಚಕಾರ ತರುತ್ತಿರಲಿಲ್ಲ, ಬದಲಾಗಿ ಕೆಎಂಎಫ್ನ ದಶಕಗಳ ವಿಶ್ವಾಸಾರ್ಹತೆಗೂ ಧಕ್ಕೆ ತರುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಂಎಫ್ ಆಡಳಿತ ಮಂಡಳಿಯು ಆಹಾರ ಇಲಾಖೆಯ ಅನುಮತಿಯೊಂದಿಗೆ ಪ್ರತಿ ಉತ್ಪನ್ನದ ಮೇಲೂ ‘ಸುರಕ್ಷಾ ಕ್ಯೂಆರ್ ಕೋಡ್’ ಅಳವಡಿಸಲು ನಿರ್ಧರಿಸಿದೆ.
ಹೇಗೆ ಕೆಲಸ ಮಾಡುತ್ತೆ ಈ ತಂತ್ರಜ್ಞಾನ? ಗ್ರಾಹಕರು ತುಪ್ಪದ ಪ್ಯಾಕೆಟ್ ಅಥವಾ ಬಾಟಲಿಯ ಮೇಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ ನಿಮ್ಮ ಮೊಬೈಲ್ಗೆ ಒಂದು ಒಟಿಪಿ (OTP) ಬರಲಿದೆ. ಆ ಒಟಿಪಿ ನಮೂದಿಸಿದ ಕೂಡಲೇ ಆ ನಿರ್ದಿಷ್ಟ ತುಪ್ಪದ ಪೂರ್ಣ ಮಾಹಿತಿ ನಿಮ್ಮ ಕಣ್ಣಮುಂದೆ ಇರಲಿದೆ. ಒಂದು ವೇಳೆ ಸ್ಕ್ಯಾನ್ ಮಾಡಿದಾಗ ಮಾಹಿತಿ ಸಿಗದಿದ್ದರೆ ಅಥವಾ ಒಟಿಪಿ ಬರದಿದ್ದರೆ ಅದು ನಕಲಿ ಎಂದು ಸುಲಭವಾಗಿ ತಿಳಿಯಬಹುದು. ಈ ಕ್ಯೂಆರ್ ಕೋಡ್ ಕೇವಲ ತುಪ್ಪದ ಅಸಲಿತನವನ್ನಷ್ಟೇ ತೋರಿಸುವುದಿಲ್ಲ, ತುಪ್ಪ ಯಾವ ಡೈರಿಯಲ್ಲಿ ತಯಾರಾಗಿದೆ? ಉತ್ಪಾದನೆಯಾದ ಮತ್ತು ಪ್ಯಾಕ್ ಆದ ನಿಖರ ದಿನಾಂಕ, ಮಾರುಕಟ್ಟೆಗೆ ಬಿಡುಗಡೆಯಾದ ಸಮಯ, ಅಧಿಕೃತ ಡೀಲರ್ ಮತ್ತು ರಿಟೇಲರ್ ವಿವರಗಳು ಕೂಡ ಇರಲಿವೆ. ಹೀಗಾಗಿ ನಂದಿನಿ ತುಪ್ಪವನ್ನು ಖರೀದಿಸುವಾಗ ಆತುರ ಪಡಬೇಡಿ. ಪ್ಯಾಕೆಟ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಆರೋಗ್ಯಕರ ಮತ್ತು ಅಸಲಿ ತುಪ್ಪವನ್ನೇ ಮನೆಗೆ ತನ್ನಿ ಎಂದು ಮಂಡಳಿ ಹೇಳಿದೆ.





