ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ
ನವದೆಹಲಿ, ಫೆ.14: ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವಕರು ನಕಲಿ ಉದ್ಯೋಗ ನೇಮಕ ಏಜೆನ್ಸಿಗಳ ಮೂಲಕ ಗಲ್ಫ್ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳಿ ಅಲ್ಲಿ ಮೋಸ ಹೋಗಿ ಸಂಕಷ್ಟಕ್ಕೆ ಸಿಲುಕಿರುವುದು ಮತ್ತು ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು, ಜೊತೆಗೆ ವಂಚನೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ದಕ್ಷಿಣ ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿರುವ ಕ್ಯಾ ಚೌಟ, ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವ ಜನರು ಉದ್ಯೋಗ ಪಡೆಯುವ ಕನಸಿನೊಂದಿಗೆ ಗಲ್ಸ್ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಕಲಿ ಏಜೆನ್ಸಿಗಳ ಮೂಲಕ ವಿದೇಶಕ್ಕೆ ತೆರಳಿ, ಅಲ್ಲಿ ಸೈಬರ್ ವಂಚಕರ ಬಲೆಗೆ ಸಿಲುಕುತ್ತಿರುವುದು, ನಿರೀಕ್ಷಿತ ಕೆಲಸ ಸಿಗದೆ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ, ವಂಚನಾ ಜಾಲಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಸಚಿವಾಲಯದ ಮೂಲಕ ಜರುಗಿಸಬೇಕು. ನಕಲಿ ಏಜೆನ್ಸಿಗಳ ಬಗ್ಗೆ ಜನರಲ್ಲಿ ಪ್ರಯಾಣ ಪೂರ್ವ ಸಮಾಲೋಚನೆ (‘ಪ್ರಿ-ಡಿಪಾರ್ಚರ್ ಕೌನ್ಸೆಲಿಂಗ್), ನಕಲಿ ಏಜೆನ್ಸಿಗಳ ಬಗ್ಗೆ ಜಾಗೃತಿ ಅಭಿಯಾನಗಳು ಹಾಗೂ ನೇಮಕಾತಿ ಸಂಸ್ಥೆಗಳ ಮಾನದಂಡ ಬಲಪಡಿಸುವ ಬಗ್ಗೆ ಸಚಿವಾಲಯ ಗಮನಹರಿಸಬೇಕು. ಅಪಾಯ ಹೆಚ್ಚಿರುವ ದೇಶಗಳಲ್ಲಿ ಮೇಲ್ವಿಚಾರಣಾ ವ್ಯವಸ್ಥೆ ಬಲಪಡಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಯುವಕರು ಕಾಂಬೋಡಿಯಾ ದೇಶಕ್ಕೆ ತೆರಳಿ ಅಲ್ಲಿ ಸೈಬರ್ ವಂಚಕರ ಜಾಲದಲ್ಲಿ ಸಿಲುಕಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಕೊನೆಗೆ ವಿದೇಶಾಂಗ ಸಚಿವಾಲಯದ ಮಧ್ಯಸ್ಥಿಕೆ ಹಾಗೂ ನಿರಂತರ ಪ್ರಯತ್ನದಿಂದಾಗಿ ಮಂಗಳೂರಿನ ಐವರು ಯುವಕರನ್ನು ಕಾಂಬೋಡಿಯಾದ ಸಂಕಷ್ಟದಿಂದ ರಕ್ಷಿಸಿ ತಾಯ್ಕಾಡಿಗೆ ಮರಳಿ ಕರೆತರಲು ಸಾಧ್ಯವಾಗಿದೆ. ಈ ಬಗ್ಗೆ ಸಂತ್ರಸ್ತರು ಹಾಗೂ ಅವರ ಕುಟುಂಬಸ್ಥರು ಅನುಭವಿಸಿದ ಯಾತನೆಗಳನ್ನು ಕ್ಯಾ. ಚೌಟ ಅವರು ಸಚಿವರ ಗಮನಕ್ಕೆ ತಂದಿದ್ದಾರೆ.
ಸಂಸದರ ಮನವಿಗೆ ಸಕಾರಾತ್ಮಕ ಸ್ಪಂದಿಸಿದ ಸಚಿವ ಡಾ.ಎಸ್. ಜೈಶಂಕರ್, ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.





