ಮೂಡುಬಿದಿರೆ: ಮಿಜಾರು ಅಲೇರಿ ಶ್ರೀ ಸತ್ಯಸಾರಮಾನಿ-ಕಾನದ ಕಟದ ಮೂಲಕ್ಷೇತ್ರದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಶಿಲಾನ್ಯಾಸ, ಭೂಮಿ ಪೂಜೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ಫೆ. 8ರಂದು ವೈಭವದಿಂದ ನಡೆಯಲಿದೆ.
ಕಾರ್ಯಕ್ರಮವು ದಿ. ಜನಾರ್ಧನ ಚೆಂಡ್ತಿಮಾರ್ ಹಾಗೂ ದಿ. ಶಿವಾನಂದ ಬಳ್ಳಾಲ್ಬಾಗ್ ವೇದಿಕೆಯಲ್ಲಿ ನಡೆಯಲಿದ್ದು, ಬೆಳಿಗ್ಗೆ 8.00 ಗಂಟೆಗೆ ಗಣಹೋಮ, ಬೆಳಿಗ್ಗೆ 9.30ಕ್ಕೆ ಶಿಲಾನ್ಯಾಸ ನೆರವೇರಲಿದೆ. ಬಳಿಕ ಸಭಾ ಕಾರ್ಯಕ್ರಮ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ಜರುಗಲಿದೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಿಥುನ್ ಎಂ. ರೈ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ಕರ್ನಾಟಕ ಸರಕಾರದ ಗೃಹಸಚಿವರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಸಮಾಜಕಲ್ಯಾಣ ಸಚಿವರಾದ ಡಾ.
ಹೆಚ್.ಸಿ. ಮಹಾದೇವಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಜೀರ್ಣೋದ್ಧಾರ ಕುರಿತ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಲಿದ್ದಾರೆ.
ಇದಕ್ಕೂ ಮುನ್ನ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಹಾಗೂ ಮುಲ್ಕಿ-ಮೂಡುಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಅವರು ಮಾಲಾರ್ಪಣೆ ಸಲ್ಲಿಸಲಿದ್ದಾರೆ. ಬಳಿಕ ಕಾನದ ಕಟದ ಭಾವಚಿತ್ರಕ್ಕೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.
ಜೀರ್ಣೋದ್ಧಾರ ಸಮಿತಿಯ ಆಶಯದಂತೆ ಕೆಳಗಿನ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಅಲೇರಿ ಪಂಜುರ್ಲಿ ದೈವಸ್ಥಾನ ಮತ್ತು ಸ್ವಾಗತ ಗೋಪುರ ನಿರ್ಮಾಣ, ಸತ್ಯದಪ್ಪ ಬೊಲ್ಲೆ ಹಾಗೂ ಕಾನದ-ಕಟದರ ಪುಣ್ಯಕ್ಷೇತ್ರ ಮತ್ತು ಸ್ವಾಗತ ಗೋಪುರ ನಿರ್ಮಾಣ, ಅಲೇರಿ ಶ್ರೀ ನಾಗಬೆಮ್ಮೆರೆ ಬನ ಅಭಿವೃದ್ಧಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ, ಐತಿಹ್ಯವುಳ್ಳ ಅಲೇರಿಯ ಕಿಂಡಿ ಅಣೆಕಟ್ಟು ಸಂರಕ್ಷಣೆ, ಅಲೇರಿ ನದಿಗೆ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಾಣ ನಡೆಯಲಿದೆ.
ಪದಾಧಿಕಾರಿಗಳ ನೇತೃತ್ವ: ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀಮತಿ ಭಾಗೀರಥಿ ಮುರುಳ್ಯ ಕಾರ್ಯಾಧ್ಯಕ್ಷರಾಗಿ ಶೇಖರ್ ಕುಕ್ಕೇಡಿ, ಗಣೇಶ್ ಪ್ರಸಾದ್ ಅಧ್ಯಕ್ಷರಾಗಿ ಮಿಥುನ್ ಎಂ. ರೈ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಅರ್ಭಿಗುಡ್ಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತ ಸಮಿತಿಯ ಗೌರವಾಧ್ಯಕ್ಷರಾಗಿ ಪರಮೇಶ್ವರ್ ಸಾಲ್ಯಾನ್, ಅಧ್ಯಕ್ಷರಾಗಿ ಶಿವರಾಜ್ ಪಿ.ಬಿ., ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಕಂಕನಾಡಿ ನೇತೃತ್ವ ವಹಿಸಿದ್ದಾರೆ.





