ವೇಣೂರು: ಇಲ್ಲಿಯ ನಿಟ್ಟಡೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಫೆ.4ರಿಂದ ೫ರವರೆಗೆ 11ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ವಿಜೃಂಭನೆಯಿಂದ ನಡೆದು ಸಂಪನ್ನಗೊಂಡಿತು.
ಫೆ. 4ರಂದು ರಾತ್ರಿ ವಾಸ್ತುಪೂಜೆ, ವಾಸ್ತುಹೋಮ, ದಿಕ್ಬಲಿ ಮುಂತಾದ ವೈದಿಕ ಕಾರ್ಯಕ್ರಮಗಳು ನಡೆದವು. ಫೆ. 5ರಂದು ನಾಗಬನದಲ್ಲಿ ಶ್ರೀ ನಾಗದೇವರಿಗೆ ತಂಬಿಲ, ಶ್ರೀ ದುರ್ಗಾದೇವಿ ಗುಡಿಯಲ್ಲಿ ಚಂಡಿಕಾಯಾಗ, ಪಂಚಾಮೃತ ಅಭಿಷೇಕ, ಪಂಚವಿಶಂತಿ ಕಲಶ, ಪಲ್ಲಪೂಜೆ, ಆದಿವಾಸ ಹೋಮ, ತುಲಾಭಾರ ಸೇವೆ, ಭಜನ ಕಾರ್ಯಕ್ರಮ, ವಿಶೇಷ ರಂಗಪೂಜೆ ಬಳಿಕ ಮಹಾಪೂಜೆ ನಡೆಯಿತು.
ಮೈಸಂದಾಯ, ದುಗಲಾಯ, ಪಂಜುರ್ಲಿ, ಮಂತ್ರದೇವತೆ, ಮೈಯಂತಿ, ಸನ್ಯಾಸಿಗುಳಿಗ ಹಾಗೂ ಕೊರಗಜ್ಜ ದೈವಗಳ ಗಗ್ಗರ ಸೇವೆ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಫೆ. ೫ರಂದು ಸಂಜೆ ನಡೆದ ನವಗುಳಿಗಗಳ ವಿಶೇಷ ಗಗ್ಗರ ಸೇವೆಯ ವೈಭವನ್ನು ಭಕ್ತರು ಕಣ್ತುಂಬಿಕೊಂಡರು.
ನೂತನ ಮೂರ್ತಿಗಳ ಪ್ರತಿಷ್ಠಾಪನೆ
ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ನವದುರ್ಗೆಯವರ ಮೂರ್ತಿ, ಬ್ರಹ್ಮ-ವಿಷ್ಣು ಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು. ದಾನಿಗಳನ್ನು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದವರನ್ನು ಅಭಿನಂದಿಸಿ ಗೌರವಿಸಲಾಯಿತು. ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ, ಸುಧಾಕರ ಬೆಂಗಳೂರು ಹಾಗೂ ರಮಾನಂದ ಅವರು ಆಗಮಿಸಿ ಭಕ್ತರನ್ನು ಸ್ವಾಗತಿಸಿದರು.





