ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ ಸಂಕಷ್ಟ ಎದುರಾಗಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಮೈಲಾರಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರಕ್ಕೆ ಹೊರಟಿದ್ದಾಗ ಮಹಾಲಿಂಗಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ
ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಬಂದಿದ್ದಳು. ಕಾರ್ಯಕ್ರಮದ ವೇಳೆ ಲಾಡ್ಜ್ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸ್ವತಃ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಅಲ್ಲದೆ, ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಸದ್ಯ ಮ್ಯೂಸಿಕ್ ಮೈಲಾರಿ ಸೇರಿದಂತೆ ಏಳು ಜನರು ಅಪರಾಧ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಪ್ರಕರಣವನ್ನು ಡಿಸೆಂಬರ್ 15ರಂದು ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಬಳಿಕ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಯಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.





