ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಿಂದ ಅಮೂಲ್ಯ ಬಂಗಾರದ ಕಿರೀಟ ನಾಪತ್ತೆಯಾಗಿದ್ದು, ಅದರ ಜಾಗದಲ್ಲಿ ನಕಲಿ ಕಿರೀಟ ಪತ್ತೆಯಾಗಿದೆ ಎಂದು ಕೇರಳದ ಪ್ರಮುಖ ಸುದ್ದಿ ಚಾನೆಲ್ ಮಾತೃಭೂಮಿ ವರದಿಮಾಡಿದೆ. ಕೇರಳ ಹೈಕೋರ್ಟ್ ಆದೇಶದಂತೆ ನಡೆದ ಲೆಕ್ಕಪರಿಶೋಧನೆಯಲ್ಲಿ ಈ ಭಾರಿ ವಂಚನೆ ಬಯಲಾಗಿದೆ. ಅಸಲಿ ಕಿರೀಟ 55 ಪವನ್ ತೂಕವಿದ್ದರೆ, ನಕಲಿ ಕಿರೀಟ ಕೇವಲ 240 ಗ್ರಾಂ ಇದೆ. ಸಿಸಿಟಿವಿ ಇಲ್ಲದ ಭಂಡಾರದಿಂದ ಕಳ್ಳತನವಾಗಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದು ಧಾರ್ಮಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.


ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಶಬರಿಮಲೆಯ ದೇವಸ್ಥಾನದ ಪವಿತ್ರ ಆಭರಣಗಳ (ತಿರುವಾಭರಣಂ) ಪಟ್ಟಿಯನ್ನು ಪರಿಶೀಲಿಸಲು ಕೇರಳ ಹೈಕೋರ್ಟ್ ನಿರ್ದೇಶನದಂತೆ ಆಮಿಕ್ಯೂಸ್ ಕ್ಯೂರಿ ಜಸ್ಟಿಸ್ ಕೆ.ಟಿ. ಶಂಕರನ್ ಅವರ ನೇತೃತ್ವದಲ್ಲಿ ಲೆಕ್ಕಪರಿಶೋಧನೆ (Audit) ನಡೆಸಲಾಗುತ್ತಿತ್ತು. ಈ ಸೆಪ್ಟೆಂಬರ್ನಲ್ಲಿ ಸನ್ನಿಧಾನದ ಭಂಡಾರವನ್ನು ತಪಾಸಣೆ ಮಾಡುವಾಗ ಈ ಭಾರಿ ವಂಚನೆ ಬಯಲಾಗಿದೆ. ಅಸಲಿ ಕಿರೀಟವು 55.72 ಪವನ್ (ಸುಮಾರು 445.78 ಗ್ರಾಂ) ತೂಕ ಹೊಂದಿದ್ದರೆ, ಪ್ರಸ್ತುತ ಭಂಡಾರದಲ್ಲಿರುವ ನಕಲಿ ಕಿರೀಟವು ಕೇವಲ 240 ಗ್ರಾಂ ತೂಗುತ್ತಿದೆ. ಅಂದರೆ ಅಸಲಿ ಕಿರೀಟಕ್ಕಿಂತ ಪ್ರಸ್ತುತ ಇರುವ ಕಿರೀಟವು ಸುಮಾರು 206 ಗ್ರಾಂ ಕಮ್ಮಿ ತೂಕ ಹೊಂದಿದೆ. ಕಿರೀಟ ಸವೆದು ತೂಕ ಕಡಿಮೆಯಾಗಿಲ್ಲ ಅಥವಾ ಅಳತೆಯಲ್ಲಿ ತಪ್ಪಾಗಿಲ್ಲ, ಬದಲಿಗೆ ಅಸಲಿ ಕಿರೀಟವನ್ನು ಕದ್ದು ನಕಲಿ ಕಿರೀಟವನ್ನು ತಂದಿಡಲಾಗಿದೆ ಎಂಬುದು ತನಿಖಾಧಿಕಾರಿಗಳ ಬಲವಾದ ಶಂಕೆಯಾಗಿದೆ.
ಈ ಬಂಗಾರದ ಕಿರೀಟದ ಇತಿಹಾಸವೇನು?
ಈ ಬಂಗಾರದ ಕಿರೀಟವನ್ನು ಆಗಸ್ಟ್ 17, 2012 ರಂದು (ಚಿಂಗಂ ಮಾಸದ ಪೂಜೆಯ ಸಂದರ್ಭದಲ್ಲಿ) ಅಯ್ಯಪ್ಪ ಸ್ವಾಮಿಗೆ ಅರ್ಪಿಸಲಾಗಿತ್ತು. ತಮಿಳುನಾಡಿನ ಚಾರ್ಟರ್ಡ್ ಅಕೌಂಟೆಂಟ್ಗಳ ಗುಂಪೊಂದು ಈ ಅಪರೂಪದ ಕಿರೀಟವನ್ನು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿತ್ತು. ದೇವಸ್ಥಾನದ ಆಡಳಿತ ಮಂಡಳಿಯಾದ ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಕಾಣಿಕೆ ನೀಡಿದ ಭಕ್ತರಿಗೆ ಅಧಿಕೃತ ರಸೀದಿಯನ್ನೂ ನೀಡಿತ್ತು. ಸಾಮಾನ್ಯ ನಿಯಮಗಳ ಪ್ರಕಾರ, ದೇವಸ್ಥಾನಕ್ಕೆ ಬರುವ ಮೌಲ್ಯಯುತ ಕಾಣಿಕೆಗಳನ್ನು ಮೊದಲು ಸನ್ನಿಧಾನದ ಭಂಡಾರದಲ್ಲಿ ಇರಿಸಲಾಗುತ್ತದೆ, ನಂತರ ಅವುಗಳನ್ನು ಹೆಚ್ಚಿನ ಭದ್ರತೆ ಇರುವ ‘ಕೇಂದ್ರೀಯ ಭಂಡಾರಕ್ಕೆ’ (Central Vault) ವರ್ಗಾಯಿಸಬೇಕು. ಆದರೆ, ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಈ ಕಿರೀಟವನ್ನು ಎಂದಿಗೂ ಭಂಡಾರಕ್ಕೆ ವರ್ಗಾಯಿಸಲೇ ಇಲ್ಲ, ಬದಲಿಗೆ ಸನ್ನಿಧಾನದಲ್ಲೇ ಇರಿಸಲಾಗಿತ್ತು. ಈ ಗಂಭೀರ ಲೋಪವು ಈಗ ತನಿಖೆಯ ಮುಖ್ಯ ವಸ್ತುವಾಗಿದೆ.



