ಹಾಸನ, ಜ. 13: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದ್ದು, ಈ ದುರ್ಘಟನೆ ಜಿಲ್ಲೆಯಲ್ಲಿನ ಮಾನವ–ಕಾಡಾನೆ ಸಂಘರ್ಷ ಮತ್ತೊಮ್ಮೆ ತೀವ್ರವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ಮುಂಜಾನೆ ಕಾಫಿ ತೋಟದಲ್ಲಿ ಸುಣ್ಣ ಹಚ್ಚುವ ಕೆಲಸಕ್ಕೆ ಪುತ್ರಿಯರಾದ ಶೋಭ ಮತ್ತು ರಾಗಿಣಿ ಜತೆ ರಾಜಮ್ಮ ತೆರಳಿದ್ದರು. ಕೆಲಸದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮೂವರು ಓಡಿದರೂ, ಶೋಭಾ ಅವರನ್ನು ಬೆನ್ನಟ್ಟಿದ ಸಲಗ ತುಳಿದು ಸ್ಥಳದಲ್ಲೇ ಸಾಯಿಸಿದೆ. ಘಟನೆಯ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ.
ಸ್ಥಳಕ್ಕೆ ಜನಪ್ರತಿನಿಧಿಗಳ ಭೇಟಿ
ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್ಕೆ ಕುಮಾರಸ್ವಾಮಿ, ಹಾಗೂ ಡಿಎಫ್ಒ ಸೌರಭ್ ಕುಮಾರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆದರೆ, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪರಿಹಾರದ ಹಣ ನಮಗೆ ಬೇಡ, ಶಾಶ್ವತ ಪರಿಹಾರ ಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಶವ ಮೇಲೆತ್ತಲು ನಿರಾಕರಿಸಿ ಪ್ರತಿಭಟನೆ ತೀವ್ರಗೊಳಿಸಿದ್ದರಿಂದ ಜಿಲ್ಲಾಧಿಕಾರಿ ಲತಾ ಕುಮಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಮೃತ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು. ಡಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಜನರನ್ನು ಮನವೊಲಿಸಲು ಪ್ರಯತ್ನಿಸಿದರು.






