ಮೇ.3 ಹಾಗೂ 5 ರಂದು ಮನೆಯಿಂದ ಮತದಾನಕ್ಕೆ ಅವಕಾಶ ಮೇ.2 ರಿಂದ 4 ವರೆಗೆ ಅಗತ್ಯ ಸೇವೆಯಲ್ಲಿರುವ ನೌಕರರಿಂದ ಮತದಾನ

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಏ.28:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. 80 ವರ್ಷ ದಾಟಿದ ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಅಗತ್ಯ ಸೇವೆಯಲ್ಲಿರುವ ನೌಕರರ ಮತದಾನಕ್ಕೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಸತ್ಯನಾರಾಯಣ ಹೇಳಿದರು.

ಶುಕ್ರವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಈ ಕುರಿತು ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳ ಸಭೆ ಜರುಗಿಸಿ ಅವರು ಮಾತನಾಡಿದರು.

ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ದಾಟಿದ 203 ಹಾಗೂ 50 ವಿಕಲಚೇತನರು ಮನೆಯಿಂದ ಮತದಾನ ಮಾಡಲು ಅವಕಾಶ ನೀಡುವಂತೆ ಕೋರಿದ್ದಾರೆ. ಇದರೊಂದಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಸೇವೆಯಲ್ಲಿರುವ 68  ನೌಕರರು ಫಾರಂ 12ಡಿ ಸಲ್ಲಿಸದ್ದಾರೆ.

ಅಗತ್ಯ ಸೇವೆಯಲ್ಲಿರುವ ನೌಕರರು ಮತ ಚಲಾಯಿಸಲು ಅನುಕೂಲವಾಗುವಂತೆ ಚಿತ್ರದುರ್ಗ ನಗರದ ತಹಶೀಲ್ದಾರ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರವನ್ನು ಸ್ಥಾಪಿಸಲಾಗುವುದು. ಮೇ.2 ರಿಂದ 4 ವರೆಗೆ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಅಗತ್ಯ ಸೇವೆಯಲ್ಲಿರುವ ನೌಕರರು ಮತದಾನ ಕೇಂದ್ರಕ್ಕೆ ಖುದ್ದಾಗಿ ಆಗಮಿಸಿ ಮತದಾನ ಮಾಡಬಹುದು. ಅಂತಿಮ ದಿನದ ನಂತರ ಮತದಾನ ಮಾಡಲು ಅವಕಾಶವಿಲ್ಲ.

ಮೇ.3 ಹಾಗೂ 5 ರಂದು ಮನೆಯಿಂದ ಮತದಾನ ಕಾರ್ಯನಿರ್ವಹಿಸಲು 16 ಸೆಕ್ಟರ್ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬ ಸೆಕ್ಟರ್ ಅಧಿಕಾರಿ, ಇಬ್ಬರು ಮತಗಟ್ಟೆ ಅಧಿಕಾರಿಗಳು, ರಾಜ್ಯ ಚುನಾವಣಾ ಆಯೋಗದಿಂದ ನೇಮಕವಾದ ಚುನಾವಣೆ ವೀಕ್ಷಕ ಹಾಗೂ ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಈ ತಂಡಗಳು 80 ವರ್ಷ ದಾಟಿದ ಹಾಗೂ ವಿಕಲಚೇತನ ಮತದಾರರ ಮನೆಗಳಿಗೆ ತೆರಳಿ, ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ತಾ.ಪಂ ಸಹಾಯಕ ನಿರ್ದೇಶಕ ಪಿ.ಟಿ.ಧನಂಜಯ, ಗ್ರಾಮಾಂತರ ಸಿಪಿಐ ಬಾಲಚಂದ್ರನಾಯ್ಕ್ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours