ಕಂಬಳೋತ್ಸವದಿಂದ ಸಮಾಜದಲ್ಲಿ ಒಗ್ಗಟ್ಟು: ಯು.ಟಿ. ಖಾದರ್
ಕಂಬಳದಿಂದ ತುಳುನಾಡಿನ ಪರಂಪರೆ ಉಳಿವು: ಮಾಣಿಲ ಶ್ರೀ
ವೇಣೂರು: ತುಳುನಾಡಿನ ಸಂಸ್ಕೃತಿ, ಪರಂಪರೆ, ಒಗ್ಗಟ್ಟು ಮತ್ತು ಸಹೋದರತೆಯನ್ನು ಯುವ ಜನಾಂಗಕ್ಕೆ ವರ್ಗಾಯಿಸುವ ಕಾರ್ಯ ಕಂಬಳದಿಂದ ಆಗುತ್ತಿದೆ. ವಸಂತ ಬಂಗೇರರು ಸುದೀರ್ಘವಾಗಿ ನಡೆಸಿಕೊಂಡು ಬಂದ ಈ ಕಂಬಳವನ್ನು ಇದೀಗ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈ ಕ್ರೀಡೆಯಿಂದ ಬಲಿಷ್ಠ ಭಾರತ ನಿರ್ಮಾಣವಾಗಲಿದ್ದು, ಆಯೋಜಕರ ವಿಶೇಷ ಪ್ರಯತ್ನ ದೇಶಕ್ಕೆ ಕೊಡುವ ಬಹುದೊಡ್ಡ ದೊಡ್ಡ ಕೊಡುಗೆ ಎಂದು ಕರ್ನಾಟಕ ವಿಧಾನಪರಿಷತ್ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಅವರು ರವಿವಾರ ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ ೩೩ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಕ್ರೀಡೆಗೆ ಆಗಮಿಸಿ ಮಾತನಾಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನ ನೀಡಿ, ತುಳುನಾಡಿನ ಕೀರ್ತಿಗೆ ಕಂಬಳದ ಮಹಿಮೆ ಉಕ್ಕಿ ಬರಲಿ. ಕಂಬಳದ ಅಭಿರುಚಿ ನನಗೂ ಇದೆ. ಅಳದಂಗಡಿಯ ಸೀಮೆಗೆ ಒಳಪಟ್ಟ ಈ ಕಂಬಳದ ಕೀರ್ತಿ ಮೇಲಕ್ಕೇರಲಿ, ತುಳುನಾಡಿನ ಪರಂಪರೆಗೆ ಉಳಿಸುವ ಕಾರ್ಯ ಈ ಮೂಲಕ ನಿರಂತರ ನಡೆಯಲಿ, ಜಗತ್ತಿಗೆ ಬಂದ ಸಂಕಷ್ಟ ಆಗಲಿ, ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದರು.
ಶನಿವಾರ ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ಶುಭ ಹಾರೈಸಿದರು. ರಾಜ್ಯ ಸುದ್ದಿವಾಹಿನಿಯ ಸುದ್ದಿ ವಾಚಕಿ ರಾಧಾ ಹೀರೇಗೌಡ ಮಾತನಾಡಿದರು.
ಮಾಚಿ ಸಚಿವ ಕೆ. ಅಭಯಚಂದ್ರ ಜೈನ್, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಗಂಗಾಧರ ಮಿತ್ತಮಾರು, ಸತೀಶ್ ಕೆ. ಕಾಶಿಪಟ್ಣ, ನಾಗೇಶ್ ಗೌಡ, ಇನಾಯತ್ ಆಲಿ, ಎ. ಜಯರಾಮ್ ಶೆಟ್ಟಿ, ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ಮತ್ತಿತರರು ಇದ್ದರು.





