ವೇಣೂರು, ಮಾ. 19: ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಭರತನಾಟ್ಯ ಕಲೆ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ನಿಯತಿ ನೃತ್ಯ ನಿಕೇತನ ವತಿಯಿಂದ ವೇಣೂರು ಜೆ.ಪಿ. ಟವರ್ನಲ್ಲಿ ಭರತನಾಟ್ಯ ತರಗತಿ ಉದ್ಘಾಟನೆಗೊಂಡಿತು.

ಗುರುವರ್ಯರ ಆಶೀರ್ವಾದದೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು. ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ಅವರ ಮಾರ್ಗದರ್ಶನದಲ್ಲಿ, ವಿದುಷಿ ಶ್ರೀಮತಿ ನಿಶಾ ಪ್ರಸಾದ್ ಮಾಣೂರು ಇವರ ನೇತೃತ್ವದಲ್ಲಿ ಆರಂಭವಾದ ಈ ತರಗತಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವ ಪ್ರಮುಖ ವೇದಿಕೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕರು, ಭರತನಾಟ್ಯವು ಕೇವಲ ನೃತ್ಯವಲ್ಲದೆ, ಅದು ಭಾವ, ರಾಗ, ತಾಳಗಳ ಸಮನ್ವಯವಾಗಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.
ಪೋಷಕರು ಮತ್ತು ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲೆಗಳ ತರಗತಿಗಳು ಪ್ರಾರಂಭವಾಗುತ್ತಿರುವುದು ಸಂಸ್ಕೃತಿ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಜೆಪಿ ಟವರ್ ನ ಮಾಲೀಕರಾದ ಜಗದೀಶ್ಚಂದ್ರ ಡಿ.ಕೆ. ಅಭಿಪ್ರಾಯ ವ್ಯಕ್ತಪಡಿಸಿದರು. ಶಂಕರ್ ಭಟ್ ನಿರೂಪಿಸಿದರು. ನಿಯತಿ ಭಟ್ ಪ್ರಾರ್ಥಿಸಿ, ಪ್ರಸಾದ್ ಎಮ್.ಕೆ ವಂದಿಸಿದರು. ಪೋಷಕರಾದ ಜಯಂತಿ ಭಟ್ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





