ಲೋಕಸಭೆ ಚುನಾವಣೆವರಗೆ ಮಾತ್ರ ಈ ಸಮ್ಮಿಶ್ರ ಸರ್ಕಾರ: ಮಾಜಿ ಸಿಎಂ ಬೊಮ್ಮಾಯಿ

 

ಬೆಂಗಳೂರು, ಮೇ26: ಒಂದೇ ಪಕ್ಷದಲ್ಲಿ ಸಮ್ಮಿಶ್ರ ಸರ್ಕಾರ ಇದೆ ಅನಿಸುತ್ತದೆ. ಕಳೆದ ಸಮ್ಮಿಶ್ರ ಸರ್ಕಾರವು ಲೋಕಸಭೆ ಚುನಾವಣೆವರೆಗೆ ಮಾತ್ರ ಇತ್ತು, ಈ ಸಮ್ಮಿಶ್ರ ಸರ್ಕಾರವೂ ಲೋಕಸಭೆ ಚುನಾವಣೆ ವರೆಗೆ ಮಾತ್ರ ಇರುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಯ್ಕೆ ವಿಚಾರ, ಭಿನ್ನಾಭಿಪ್ರಾಯ ಗಮನಿಸಿದ್ದೇನೆ. ಅವರಲ್ಲಿರುವ ಎರಡು ಬಣಗಳು, ಮಂತ್ರಿಗಳ ಆಯ್ಕೆಯಲ್ಲಿ ಗೊಂದಲ ಎಲ್ಲ ನೋಡಿದ್ದೇವೆ. ಈ ಸರ್ಕಾರ ಒಂದು ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ಥರ ಇದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ವಿಳಂಬ ವಿಚಾರವಾಗಿ ಮಾತನಾಡಿ, ನೂತನ ಸರ್ಕಾರ ರಚನೆಯಾಗಿದೆ, ಎಂಟು ಜನ ಸಚಿವರಾಗಿದಾರೆ. ಈ ಸಚಿವರು ರಾಜ್ಯ, ಜನರ ಹಿತದೃಷ್ಟಿಯಿಂದ ಮಾತಾಡ್ತಿಲ್ಲ, ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಬದಲು ದ್ವೇಷದ ರಾಜಕಾರಣವೇ ಈ ಸರ್ಕಾರಕ್ಕೆ ಪ್ರಮುಖವಾಗಿದೆ, ಅವರು ಏನೇ ಕೇಸ್ ಹಾಕಿದರೂ ಸಮರ್ಥವಾಗಿ ಎದುರಿಸ್ತೇವೆ. ಹಿಂದೆಯೂ ಅವರು ಕೇಸ್ ಗಳನ್ನು ಹಾಕಿದ್ರು. ಒಂದು ಚುನಾಯಿತ ಸರ್ಕಾರದ ಎದುರು ಹಲವು ಸಮಸ್ಯೆಗಳಿವೆ, ಈ ಸಮಸ್ಯೆಗಳನ್ನು ನಿವಾರಣೆ ಮಾಡುವ ವಿಚಾರ ಎಲ್ಲೂ ಕಾಣ್ತಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಎಲ್ಲೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಪ್ರಯತ್ನ ಆಗಿಲ್ಲ ಎಂದು ಹೇಳಿದರು.

ಕೆಳ ಹಂತದಲ್ಲಿ ಯಾವುದೇ ಕೆಲಸ ಆರಂಭವಾಗಿಲ್ಲ. ಕುಡಿಯುವ ನೀರನ ಪೂರೈಕೆಗೆ ಹಣನೂ ಬಿಡುಗಡೆ ಆಗಿಲ್ಲ, ಬರ ಇರುವ ತಾಲ್ಲೂಕುಗಳ ಪಟ್ಟಿ ಮಾಡಿ ಕೂಡಲೇ ಹಣಬಿಡುಗಡೆ ಮಾಡಲಿ, ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಹೊಡೆದಾಡುತ್ತಿದ್ದಾರೆ. ಜನರ ಸಮಸ್ಯೆ ಬಗೆಹರಿಸಲು ಖಾತೆ ಹಂಚಬೇಕು, ಇನ್ನೂ ಖಾತೆಗಳನ್ನೇ ಇವರು ಹಂಚಿಲ್ಲ. ಪೂರ್ಣ ಪ್ರಮಾಣದ ಸಂಪುಟ ರಚನೆ ಬಳಿಕ ಖಾತೆ ಹಂಚುತ್ತಾರಂತೆ, ಇದನ್ನು ನಾನು ಎಲ್ಲೂ ಕೇಳಿಲ್ಲ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹಿಸಿದರು.

ಅಶ್ವಥ್ ನಾರಾಯಣ, ಹರೀಶ್ ಪೂಂಜಾ ವಿರುದ್ಧ ಕೇಸ್ ಹಾಕಿರುವ ವಿಚಾರವಾಗಿ, ಈ ದೇಶದಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ ಇದೆ. ತಪ್ಪಿದ್ದರೆ ಕಾನೂನಾತ್ಮಕ ಕ್ರಮ ಆಗಲಿ, ಆದರೆ ರಾಜಕೀಯ ಟೀಕೆಗಳಿಗೂ ಸರ್ಕಾರ ಕೇಸ್ ಹಾಕುತ್ತಿದೆ. ಇದು ದುರಹಂಕಾರದ, ದ್ವೇಷದ ರಾಜಕಾರಣ, ಜನರನ್ನು ಭಯಪಡಿಸಿ ಆಡಳಿತ ನಡೆಸುವ ಭ್ರಮೆ ಇವರಿಗಿದೆ. ಇಂಥ ಕೆಲಸಕ್ಕೆ ಕೈ ಹಾಕಿದರೆ ಕೆಲವೇ ದಿನಗಳಲ್ಲಿ ಜನವಿರೋಧಿ ಸರ್ಕಾರ ಎಂಬ ಹೆಸರು ಬರುತ್ತೆ,ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಕಿಡಿಕಾರಿದರು.

ಆರ್‌ ಎಸ್‌ ಎಸ್‌ ಬ್ಯಾನ್‌ ವಿಚಾರವಾಗಿ ಮಾತನಾಡಿ, ಆರ್‌ ಎಸ್‌ ಎಸ್‌ ನಿಷೇಧಿಸಲು ಯಾರಿಗೂ ಸಾಧ್ಯವಿಲ್ಲ. ಇಂಥ ಸಾಹಸಕ್ಕೆ ಕೈಹಾಕಿದವರನ್ನು ಜನ ಈಗಾಗಲೇ ಮನೆಗೆ ಕಳಿಸಿದ್ದಾರೆ. ನಾನು ಸವಾಲು ಹಾಕ್ತಿನಿ, ಆರ್‌ ಎಸ್‌ ಎಸ್‌ ನಿಷೇಧಿಸಲಿ ನೋಡೋಣ, ಯಾವುದೇ ಸಂಘಸಂಸ್ಥೆ ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಒಂದು ಸಮುದಾಯದ ತುಷ್ಟೀಕರಷಕ್ಕೆ ಈ ಥರ ಹೇಳಿಕೆ ಕೊಡ್ತಿದಾರೆ. ಆರ್‌ ಎಸ್‌ ಎಸ್‌ ಬಜರಂಗ ದಳ ನಿಷೇಧ ಬಗ್ಗೆ ಸಿಎಂ ತಮ್ಮ ಅಭಿಪ್ರಾಯ, ನಿಲುವು ಸ್ಪಷ್ಟ ಪಡಿಸಲಿ. ಸಚಿವರ ಹೇಳಿಕೆಗೆ ಸಿಎಂ ಬೆಂಬಲ ಇದೆಯಾ ಅಂತ ಜನತೆಗೆ ತಿಳಿಸಲಿ ಎಂದು ಹೇಳಿದರು.

ಮುಂದಿನ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆ ಜಾರಿ ಭರವಸೆ ಕೊಟ್ಟಿದಾರೆ. ಮುಂದಿನ ಸಭೆವರೆಗೂ ಕಾದು ನೋಡೋಣ,ಆದ್ರೆ ಜನ ಈಗಾಗಲೇ ಕರೆಂಟ್ ಬಿಲ್ ಕಟ್ಟಲ್ಲ, ಟಿಕೆಟ್ ತಗೊಳ್ಳಲ್ಲ ಅಂತಿದಾರೆ. ಜನರೇ ಈ ನಿರ್ಧಾರ ಕೈಗೊಂಡಿರೋದ್ರಿಂದ ನಮ್ಮ ನಿಲುವು ಸಹ ಜನಪರ ಆಗಿರುತ್ತೆ. ಜನರ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours