ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ತಲೆದೂರಿರುವ ನಡುವೆಯೇ ಕಳ್ಳರ ಕೈಚಳಕ ಹೆಚ್ಚಾಗಿದೆ. ವಿಶೇಷವಾಗಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ವ್ಯತ್ಯಯದಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿರುವಾಗ, ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಳ್ಳರು ದಾಳಿ ನಡೆಸಿ 6 ಗ್ಯಾಸ್ ಸಿಲಿಂಡರ್ಗಳನ್ನು ಕಳವು ಮಾಡಿದ್ದಾರೆ. ಅಡುಗೆ ಕೋಣೆಯ ಬೀಗ ಮುರಿದು, ಮಧ್ಯಾಹ್ನದ ಬಿಸಿಯೂಟಕ್ಕಾಗಿ ಇರಿಸಿದ್ದ ಸಿಲಿಂಡರ್ಗಳನ್ನು ಹೊತ್ತೊಯ್ದಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇತ್ತೀಚೆಗೆ ಭಾಲ್ಕಿ ಪ್ರದೇಶದಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ಮಲ್ಲಿಕಾರ್ಜುನ ಕಾಂತಪ್ಪ ಅವರು ಗ್ಯಾಸ್ ಸಿಲಿಂಡರ್ ಖರೀದಿಸಲು ಗೋದಾಮಿಗೆ ತೆರಳಿದ ವೇಳೆ ಅಪರಿಚಿತ ವ್ಯಕ್ತಿ ಸಿಲಿಂಡರ್ ಕದ್ದು ಪರಾರಿಯಾಗಿದ್ದಾನೆ. ಈ ಘಟನೆ ಮಾರ್ಚ್ 14ರಂದು ನಡೆದಿದ್ದು, ನಂತರ ಬೆಳಕಿಗೆ ಬಂದಿದೆ. ಈ ಬಗ್ಗೆ ಭಾಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇದೇ ವೇಳೆ, ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಸಿ ಲೇಔಟ್ನ ಸಾಯಿ ಅಪಾರ್ಟ್ಮೆಂಟ್ನಲ್ಲಿ ಹಾಡಹಗಲೇ ಇಬ್ಬರು ಕಳ್ಳರು ಗ್ಯಾಸ್ ಸಿಲಿಂಡರ್ ಕಳವು ಮಾಡಿದ್ದಾರೆ. ಯುಗಾದಿ ಹಬ್ಬದ ದಿನ ಹೆಲ್ಮೆಟ್ ಧರಿಸಿ ಸ್ಕೂಟರ್ನಲ್ಲಿ ಬಂದಿದ್ದ ಖದೀಮರು, ಅಪಾರ್ಟ್ಮೆಂಟ್ ಬೇಸ್ಮೆಂಟ್ಗೆ ನುಗ್ಗಿ ಎರಡು ಸಿಲಿಂಡರ್ಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ.ಈ ಎಲ್ಲಾ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಗ್ಯಾಸ್ ಕೊರತೆಯ ಸಮಯದಲ್ಲಿ ಇಂತಹ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.





