ಕಾಂಗ್ರೆಸ್ ನಲ್ಲಿ ಸಿಎಂ ರೇಸ್ ಸ್ಥಾನಕ್ಕೆ ಭರ್ಜರಿ ಪೈಪೋಟಿ

 

 

 

ಬೆಂಗಳೂರು,ಮೇ12- ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬಂತೆ ಚುನಾವಣಾ ಫಲಿತಾಂಶ ಘೋಷಣೆಗೂ ಮೊದಲೇ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆಗಳು ನಡೆಯಲಾರಂಭಿಸಿವೆ. ಚುನಾವಣೋತ್ತರ ಕೆಲ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನೆಡೆ ಸಾಧಿಸಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೈ ಪಾಳೆಯದಲ್ಲಿ ಉತ್ಸಾಹ ಪುಟಿದೇಳುತ್ತಿದೆ.

ಅದಕ್ಕಾಗಿ ಹಲವು ರೀತಿಯ ಚಟುವಟಿಕೆಗಳು ನಿನ್ನೆ ಸಂಜೆಯಿಂದಲೇ ಶುರುವಾಗಿವೆ. ಮೇ 10ರವರೆಗೂ ಚುನಾವಣೆಯಲ್ಲಿ ಗೆಲ್ಲಲಿಕ್ಕಾಗಿ ಹಗಲಿರುಳು ಶ್ರಮಿಸಿದ ನಾಯಕರು, ನಿನ್ನೆ ಮಧ್ಯಾಹ್ನದವರೆವರೆಗೂ ವಿಶ್ರಾಂತಿ ಪಡೆದು ಬಳಿಕ ಮತ್ತೆ ಸಕ್ರಿಯರಾಗಿದ್ದಾರೆ.

ಚುನಾವಣೆಗೂ ಮುನ್ನಾ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಹುದ್ದೆಯದೇ ಬಿಸಿಬಿಸಿ ಚರ್ಚೆಯ ವಸ್ತುವಾಗಿತ್ತು. ಅದು ಪಕ್ಷಕ್ಕೆ ಸಾಕಷ್ಟು ಹಾನಿ ಮಾಡುವ ಸಾಧ್ಯತೆಯೂ ಇತ್ತು. ಬಣ ರಾಜಕೀಯಗಳೇ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ ಎಂಬ ಮುನ್ಸೂಚನೆ ಅರಿತ ಹೈಕಮಾಂಡ್ ಕೂಡ ಸ್ಪಷ್ಟ ನಿರ್ದೇಶನ ನೀಡಿತ್ತು, ನಾಯಕರು ಎಚ್ಚೆತ್ತುಕೊಂಡು ತಪ್ಪುಗಳನ್ನು ಸರಿ ಪಡಿಸಿಕೊಂಡಿದ್ದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಿಂಬಾಲಕರು ಮುಂದಿನ ಮುಖ್ಯಮಂತ್ರಿ ಕುರಿತು ನೀಡುತ್ತಿದ್ದ ಹೇಳಿಕೆಗಳಿಗೆ ಬ್ರೆಕ್ ಬಿದ್ದಿತ್ತು, ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಲವು ಕಡೆ ಮುಂದಿನ ಬಾರಿ ಸಮುದಾಯಕ್ಕೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಪ್ರಸ್ತಾಪಿಸುವ ಮೂಲಕ ಮುಖ್ಯಮಂತ್ರಿಯ ಆಕಾಂಕ್ಷೆಯನ್ನು ವ್ಯಕ್ತ ಪಡಿಸಿದ್ದವರು, ಇದ್ದಕ್ಕಿಂತೆ ತಮ್ಮ ವರಸೆ

ಬದಲಾಯಿಸಿದರು. ಫಲಿತಾಂಶದ ನಂತರ ಶಾಸಕರು ಮತ್ತು ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಮಾಡಲಿದೆ ಎಂದು ಹೇಳಿ ಜಾರಿಕೊಂಡರು.

ಚುನಾವಣೆಯ ಸಮೀಪದಲ್ಲಿ ಈ ಹೇಳಿಕೆಗಳು ಹಾಗೂ ಬೆಳವಣಿಗೆಗಳಿಗೆ ಕಡಿವಾಣ ಹಾಕುವ ಜೊತೆಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಾವಿಬ್ಬರು ಒಟ್ಟಾಗಿದ್ದೇವೆ ಎಂದು ಬಿಂಬಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಜಂಟಿಯಾಗಿ ಆಪ್ತ ಮಾತುಕತೆ ಮಾಡುವುದು, ಒಟ್ಟಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸುವುದು, ಪ್ರಣಾಳಿಕೆಯನ್ನು ಜಾರಿ ಮಾಡುವುದಾಗಿ ಆಣೆ ಪ್ರಮಾಣ ಮಾಡುವುದು ಸೇರಿದಂತೆ ಅನೇಕ ಪ್ರಯತ್ನಗಳನ್ನು ಮಾಡಿದರು. ಕಾಂಗ್ರೆಸ್ ಒಟ್ಟಾಗಿದೆ ಎಂಬ ಸಂದೇಶ ರವಾನೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು.

ಒಂದು ವೇಳೆ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸರ್ಕಾರ ರಚನೆ ಸುಗಮವಾಗಲಿದೆ. ಮುಖ್ಯಮಂತ್ರಿ ಆಯ್ಕೆಯ ಚರ್ಚೆ ಪ್ರಸ್ತುತವಾಗಲಿದೆ. ಇಲ್ಲವಾದರೆ ಸಮ್ಮಿಶ್ರ ಸರ್ಕಾರ ರಚನೆಯ ಚರ್ಚೆಗಳು ನಡೆಯಲಾರಂಭಿಸುತ್ತವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಷ್ಟು ಸುಲಭವಾಗಿ ಸರ್ಕಾರ ರಚನೆಗೆ ಬಿಟ್ಟುಕೊಡಲಿದೆ ಎಂಬ ಆತಂಕ ಕಾಂಗ್ರೆಸಿಗರನ್ನು ಕಾಡುತ್ತಿದೆ.

ಒಂದು ವೇಳೆ ಸರಳ ಬಹುಮತದ ಹತ್ತಿರ ಬಂದು ಹಿನ್ನೆಡೆ ಅನುಭವಿಸಿದರೆ ಸಮ್ಮಿಶ್ರ ಸರ್ಕಾರ ಅನಿವಾರ್ಯತೆ ಎದುರಾಗಲಿದೆ. ಅದರಲ್ಲಿ ಜೆಡಿಎಸ್-ಬಿಜೆಪಿ ಅಥವಾ ಜೆಡಿಎಸ್-ಕಾಂಗ್ರೆಸ್ ಸರ್ಕಾರಗಳ ಚರ್ಚೆಗಳಿವೆ.

ಅಥವಾ ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದಾದರು ಒಂದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೆ, ಪ್ರಾದೇಶಿಕ ಪಕ್ಷದಿಂದ ಭಿನ್ನ ಗುಂಪುನ್ನು ಮಹಾರಾಷ್ಟ್ರದ ಮಾದರಿಯಲ್ಲಿ ಸರ್ಕಾರ ರಚಿಸುವ ಚರ್ಚೆಗಳು ನಡೆಯುತ್ತವೆ.

ರೇಸ್‍ನಲ್ಲಿರುವ ಕಾಂಗ್ರೆಸ್ ಹುರಿಯಾಳುಗಳು:
ಜೆಡಿಎಸ್ ಪ್ರಮುಖರಾದ ಎಚ್.ಡಿ.ಕುಮಾರಸ್ವಾಮಿ ಸಿಂಗಾಪೂರ್‍ನಲ್ಲಿರುವುದರಿಂದ ರಾಜಕೀಯ ಬೆಳವಣಿಗೆಗಳು ಮತ್ತಷ್ಟು ಕುತೂಹಲ ಕೆರಳಿಸಿವೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆಗಳಿದ್ದಿದ್ದೇ ಆದರೆ ಅಲ್ಲಿ ಮುಖ್ಯಮಂತ್ರಿ ರೇಸ್‍ನಲ್ಲಿ ಸಹಜವಾಗಿ ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಮುಖ್ಯವಾಹಿನಿಯಲ್ಲಿ ನಿಲ್ಲಲಿದ್ದಾರೆ. ಸ್ಪಷ್ಟ ಬಹುಮತ ಬಂದ ವೇಳೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮುಖ್ಯವಾಹಿನಿಯಲ್ಲಿ ನಿಲ್ಲಲಿದ್ದು, ಉಳಿದಂತೆ ಪರಮೇಶ್ವರ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ, ಕೆ.ಹೆಚ್.ಮುನಿಯಪ್ಪ ಸೇರಿದಂತೆ ಅನೇಕ ನಾಯಕರು ರೇಸ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫಲಿತಾಂಶ ಕನ್ನಡಿಯಷ್ಟು ಸ್ಪಷ್ಟವಾಗಿದ್ದದ್ದೆ ಆದರೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೂ ಹೆಚ್ಚು ತರಕಾರು ಇಲ್ಲದೆ ನಡೆಯಲಿದೆ, ಇಲ್ಲವಾದರೆ ಕಾಂಗ್ರೆಸ್ ಕಗ್ಗಂಟುಗಳು ಬಿಡಿಸಲಾಗದಷ್ಟು ಜಟಿಲವಾಗಲಿವೆ. ಮುಂದಿನ ವರ್ಷವೇ ಲೋಕಸಭೆ ಚುನಾವಣೆ ನಡೆಯುವುದರಿಂದ ಕೆಲ ನಾಯಕರು ತ್ಯಾಗಕ್ಕೆ ಸಿದ್ದವಾಗುವ ಅನಿವಾರ್ಯತೆಯೂ ಪಕ್ಷದ ಮುಂದಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಏನೇ ಆದರೂ ಎಲ್ಲದಕ್ಕೂ ನಾಳೆಯವರೆಗೂ ಕಾಯುವುದು ಅನಿವಾರ್ಯವಾಗಿದೆ.

[t4b-ticker]

You May Also Like

More From Author

+ There are no comments

Add yours