ಜಿಲ್ಲೆಯ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ ನಡೆಯುತ್ತಿದೆ. ಒಂದು ತಿಂಗಳ ಕಾಲ ನಡೆಯುವ ಜಾತ್ರೋತ್ಸವದ ಪ್ರಮುಖ ಆಕರ್ಷಣೆ ಪೊಳಲಿ ಚೆಂಡು ಉತ್ಸವ ಆಗಿದೆ. ಐದು ದಿನಗಳ ಕಾಲ ನಡೆಯುವ ಚೆಂಡು ಉತ್ಸವ ಭಕ್ತರ ಆಕರ್ಷಣೆಯ ಕಾರ್ಯಕ್ರಮವಾಗಿದ್ದು, ಕಾಲ್ಚೆಂಡು ಆಟದ ರೀತಿ ದೇವಳದ ಎದುರಿನ ಗದ್ದೆಯಲ್ಲಿ ರಬ್ಬರ್ ಚೆಂಡಿನಲ್ಲಿ ಭಕ್ತರು ಆಟ ಆಡುತ್ತಾರೆ.
ಪುರಾಣದಲ್ಲಿ ಶ್ರೀ ದೇವಿಯು ಚಂಡ ಮುಂಡರನ್ನು ವಧಿಸಿ, ಶಿರವ ಚೆಂಡಾಡಿದಳು ಎನ್ನುವ ಪ್ರತೀತಿ ಇದೆ. ಶ್ರೀ ದೇವಿ ಮಹಾತ್ಮೆ ಯಕ್ಷಗಾನದಲ್ಲೂ ದೃಶ್ಯ ಕಾಣಬಹುದು. ಇದೇ ಹಿನ್ನೆಲೆಯಲ್ಲಿ, ಇಂದಿಗೂ ದಕ್ಷಿಣ ಕನ್ನಡದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಚೆಂಡಾಟ ಆಡುತ್ತಾರೆ. ಒಂದು ತಿಂಗಳ ಕಾಲ ನಡೆಯುವ ಜಾತ್ರೋತ್ಸವದ ಕಡೆಯ ಐದು ದಿನ ಭಕ್ತರು ದೇವಳದ ಗದ್ದೆಯಲ್ಲಿ ಚೆಂಡು ಉತ್ಸವ ನಡೆಯುತ್ತದೆ. ಈ ಚೆಂಡು ಉತ್ಸವ ಕರಾವಳಿಯಲ್ಲಿ ಪುರಲ್ದ್ ಚೆಂಡು ಅಂತಾನೇ ಪ್ರಸಿದ್ಧಿ. ಚರ್ಮದ ಚೆಂಡು ಇದಾಗಿದ್ದು, ಮಿಜಾರಿನಲ್ಲಿರುವ ಕಾಬ್ಲರ್ ಕುಟುಂಬದಿಂದ ಮಾಡಲ್ಪಟ್ಟಿದೆ. ಕಡಪು ಕರಿಯಾದಿಂದ ಬಂದ ಎಣ್ಣೆ ಮಿಲ್ಲರ್ ಕುಟುಂಬಕ್ಕೆ ಕಾಬ್ಲರ್ ಕುಟುಂಬದಿಂದ ಚೆಂಡನ್ನು ತರುವ ಜವಾಬ್ದಾರಿಯನ್ನು ನೀಡಲಾಗುತ್ತದೆ.ಕಳೆದ 16 ವರ್ಷಗಳಿಂದ ಪೊಳಲಿ ಚೆಂಡಿನ ಸಿದ್ಧತೆಯನ್ನು ಶ್ರದ್ಧಾ ಭಕ್ತಿಯಿಂದ ನಿರ್ಮಿಸುತ್ತಿರುವವರು ನುರಿತ ಚಮ್ಮಾರ ಪದ್ಮನಾಭ ಅವರು, 27 ವರ್ಷಗಳಿಂದ ಕ್ಷೇತ್ರದ ಜಾತ್ರೆಗೆ ಚೆಂಡು ತಯಾರಿಸಿಕೊಡುತ್ತಿದ್ದಾರೆ. ಈ ಚೆಂಡನ್ನು ಸೋಮವಾರ ಬೆಳಿಗ್ಗೆ ಪದ್ಮನಾಭ ಅವರ ಮನೆಯಂಗಳದಲ್ಲಿರುವ ಮಹಮ್ಮಾಯಿ ದೇವಿಯ ಸನ್ನಿಧಿಯಲ್ಲಿ ಪೂಜಿಸಲಾಯಿತು. ಬಳಿಕ ಪೊಳಲಿ ಕ್ಷೇತ್ರದ ಪರವಾಗಿ ಬಂದ ಕಡಪುಕರಿಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.ಎಪ್ರಿಲ್ 6ರಂದು ಆರಂಭವಾದ ಕೊಡಿ ಚೆಂಡು ಉತ್ಸವ ಐದು ದಿನಗಳ ಕಾಲ ನಡೆದು ಎಪ್ರಿಲ್ 10 ರಂದು ಮುಕ್ತಾಯಗೊಳ್ಳಲಿದೆ. ಎಪ್ರಿಲ್ 11 ರಂದು ಅದ್ದೂರಿಯಾಗಿ ನಡೆಯುವ ರಥೋತ್ಸವ ಬಳಿಕ ಪೊಳಲಿ ರಾಜರಾಜೇಶ್ವರಿಯ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.





