15 ವರ್ಷದ ನಂತರ ಮೈ ತುಂಬಿ ಹರಿಯುತ್ತಿದೆ ಐತಿಹಾಸಿಕ ಸಂಗೇನಹಳ್ಳಿ ಕೆರೆ, ಎಷ್ಟು ಎಕರೆ ಕೃಷಿಗೆ ಅನುಕೂಲ

 

ದಾವಣಗೆರೆ( Davanagere) ಅಕ್ಟೋಬರ್‌, 14; ದಾವಣಗೆರೆ ಜಿಲ್ಲೆಯ ದೊಡ್ಡ ಕೆರೆಗಳ ಪೈಕಿ ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆಯೂ ಒಂದಾಗಿದೆ. ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗೇನಹಳ್ಳಿ ಕೆರೆ 15 ವರ್ಷಗಳ ನಂತರ ಕೋಡಿ ಬಿದ್ದಿದ್ದು ಜನರಲ್ಲಿ ಸಂತಸ ಮನೆ ಮಾಡಿದೆ.

ಸುಮಾರು 1,200 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ ಸುಮಾರು 4,000 ಹೆಕ್ಟೇರ್‌ ನೀರಾವರಿ ಸೌಲಭ್ಯವನ್ನು ನೀಡುತ್ತಿದೆ.

ಜಗಳೂರು ತಾಲೂಕಿನಲ್ಲಿ ಈ ಹಿಂದೆ ಮಳೆಯ ಪ್ರಮಾಣ ಕಡಿಮೆ ಇದ್ದು, ಇದೀಗ ಅದೇ ವಾಡಿಕೆಯನ್ನು ಸುಳ್ಳು ಮಾಡಿ ದಾಖಲೆ ಮಟ್ಟದಲ್ಲಿ ಮಳೆ ಸುರಿದಿದ್ದು ಇತಿಹಾಸ ಸೃಷ್ಟಿಯಾಗಿದೆ.

 

ಈ ಪ್ರದೇಶದಲ್ಲಿ ಮಳೆ ಆಧಾರಿತ ಭೂಮಿ ಹೆಚ್ಚಾಗಿ ಇದ್ದು, ಇದೀಗ ಮಳೆ ಹೆಚ್ಚಾಗಿ ಸುರಿದಿರುವ ಕಾರಣ ಇಲ್ಲಿನ ರೈತರ ಮುಖದಲ್ಲಿ ಸಂತಸ ತರಿಸಿದಂತಾಗಿದೆ. ಬೆಟ್ಟ, ಗುಡ್ಡಗಳಿಂದ ಹರಿದು ಬರುವ ಮಳೆಯ ನೀರು ನೇರವಾಗಿ ಹಳ್ಳಕೊಳ್ಳಗಳಿಗೆ ಬಂದು ಸೇರಲಿದೆ. ಹಾಗೆಯೇ ಸಂಗೇನಹಳ್ಳಿ ಕೆರೆಗೂ ಕೂಡ ಅಕ್ಕಪಕ್ಕದ ಊರುಗಳ ಬೆಟ್ಟಗುಡ್ಡಗಳಿಂದ ನೀರು ಹರಿದುಬರುತ್ತದೆ. ತೋರಣಗಟ್ಟೆ, ಕಟ್ಟಿಗೆಹಳ್ಳಿ ಸಮೀಪವಿರುವ ಅತಿ ಎತ್ತರದ ಗುಹೇಶ್ವರ ಬೆಟ್ಟದಿಂದಲೂ ಸಹ ಸಂಗೇನಹಳ್ಳಿ ಕೆರೆಗೆ ನೀರು ಹರಿದುಬರುತ್ತದೆ. ಮತ್ತು ಇಲ್ಲಿ ಸಣ್ಣಪುಟ್ಟ ಹಳ್ಳಗಳಿಂದಲೂ ಸಹ ನೀರು ನೇರವಾಗಿ ಕೆರೆಯನ್ನು ಸೇರುತ್ತದೆ. ಜಗಳೂರು ತಾಲೂಕಿನಲ್ಲಿ ದೊಡ್ಡ ಕೆರೆ ಅಂತ ಇರುವುದು ಇದೊಂದೆ. ಹಾಗಾಗಿ ಅದೆಷ್ಟೋ ಕೃಷಿಕರ ಬಾಳಿಗೆ ಈ ಕೆರೆ ಜೀವನಾಡಿ ಆಗಿದೆ.

ರೈತ ಕೃಷಿಗೆ  ಜೀವನಾಡಿ ಆಗಿರುವ ಜಲಮೂಲ

ಇನ್ನು ಏಷ್ಯಾಖಂಡದ ಅತಿ ಎರಡನೇ ದೊಡ್ಡ ಕೆರೆ ಸೂಳೆಕೆರೆ ಬಳಿಕ ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆಯೂ ಸಹ ದೊಡ್ಡದು‌. ಇದೀಗ ಈ ಕೆರೆ ತುಂಬಿ ಹರಿಯುತ್ತಿದ್ದು, ಇತಿಹಾಸ ಪ್ರಸಿದ್ಧಿ ಪಡೆದಿರುವ ಕಾರಣ ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಾಣ ಮಾಡಿದ್ದ ಅಸಗೋಡು ಕೆರೆ, ಬಿಳಚೋಡು ಕೆರೆ, ತುಪ್ಪದಹಳ್ಳಿ ಕೆರೆ, ರಸ್ತೆಮಾಚಿಕೆರೆ, ಬಚದರಗೊಳ್ಳ ಕೆರೆ, ಹಿರೇಅರಕೆರೆ, ಮಲೆಮಾಚಿಕೆರೆ, ಮಡ್ರಳ್ಳಿ ಹೊಸಕೆರೆ, ಕೆಳಗೋಟೆ ಕೆರೆ, ರಂಗಯ್ಯನದುರ್ಗ ಕೆರೆ, ಹೊಸಕೆರೆಯ ಕೆರೆ ಸೇರಿದಂತೆ ಎಲ್ಲಾ ಕೆರೆಗಳು ಬಹುತೇಕ ಕೋಡಿ ಬಿದ್ದಿವೆ. ಮೈಸೂರು ಸಂಸ್ಥಾನದಲ್ಲಿ ಸಚಿವರಾಗಿದ್ದ ಜಗಳೂರು ಇಮಾಮ್‌ಸಾಬ್‌ ಅವರ ಕಾಲದಲ್ಲಿ ಸಂಗೇನಹಳ್ಳಿ ಕೆರೆಯನ್ನು ನಿರ್ಮಿಸಲಾಗಿತ್ತು. ಕುದುರೆ ಲಾಳಾಕಾರದಲ್ಲಿರುವ ಕೋಡಿಯಿಂದ ಧುಮ್ಮಿಕ್ಕುವ ನೀರು ಇದೀಗ ಕಣ್ಮನ ಸೆಳೆಯುತ್ತದೆ.

 

ಈ ಸೊಬಗನ್ನು ಸವಿಯಲು ನಿತ್ಯ ಜನರು ಕಿಕ್ಕಿರಿದು ಬರುತ್ತಲೇ ಇದ್ದಾರೆ

ಚಾನಲ್‌ ಮೂಲಕ ಕೃಷಿಗೆ ನೀರು

ಸಂಗೇನಹಳ್ಳಿ ಕೆರೆಯ ನೀರನ್ನು ಕಲ್ಲೇದೇವಪುರ, ತೋರಣಗಟ್ಟೆ, ಗೌರಮ್ಮನಹಳ್ಳಿ, ರಂಗೇನಹಳ್ಳಿ, ದೋಣೆಹಳ್ಳಿ, ತುರುವನೂರು, ಗುಡ್ಡದ ರಂಗೇನಹಳ್ಳಿ ಸೇರಿದಂತೆ ಇನ್ನು ಮುಂತಾದ ಊರುಗಳ ಜನರು ಹೆಚ್ಚಾಗಿ ಆಶ್ರಯಿಸಿದ್ದಾರೆ. ಮಳೆ ಹೆಚ್ಚಾದಗಲೆಲ್ಲ ಕೆರೆಯ ತೂಬನ್ನು ಎತ್ತಲಾಗುತ್ತದೆ. ಇದರಿಂದ ಚಾನೆಲ್‌ ಮೂಲಕ ರೈತರಿಗೆ ನೀರನ್ನು ಒದಗಿಸಲಾಗುತ್ತದೆ.

ನೀರಿನ ಸೌಲಭ್ಯ ಪಡೆದಿರುವ ಕೃಷಿ ಭೂಮಿಗಳು

ಜಗಳೂರು ತಾಲೂಕಿನಲ್ಲಿ ಯಾವುದೇ ನದಿ ಮೂಲಗಳಿಲ್ಲ, ಬದಲಾಗಿ ರೈತರಿಗೆ ಸದ್ಯ ಸಂಗೇನಹಳ್ಳಿ ಕೆರೆಯೇ ಆಶ್ರಯವಾಗಿದೆ. ಆದರೆ ಪ್ರಾಕೃತಿಕವಾಗಿ ಮಳೆಯ ನೀರನ್ನು ಆಶ್ರಯಿಸಿರುವ ಸಣ್ಣ ಕೆರೆಗಳನ್ನು ಇಲ್ಲಿ ಕಾಣಬಹುದು. ತಾಲೂಕಿನಾದ್ಯಂತ ಸುಮಾರು 10ಕ್ಕೂ ಹೆಚ್ಚು ಸಣ್ಣ ಕೆರೆಗಳನ್ನು ಕಾಣಬಹುದು. ಅವುಗಳಲ್ಲಿ ಬಹುತೇಕ ಸಣ್ಣ ಕೆರೆಗಳು 200 ರಿಂದ 450ಕ್ಕೂ ಹೆಚ್ಚು ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸು ಸಾಮರ್ಥ್ಯವನ್ನು ಹೊಂದಿವೆ. ಅತಿ ದೊಡ್ಡ ಹಾಗೂ ಇತಿಹಾಸ ಪ್ರಸಿದ್ಧಿವುಳ್ಳ ಸಂಗೇನಹಳ್ಳಿ ಕೆರೆ 4,000 ಹೆಕ್ಟೇರ್‌ ಭೂಮಿಗೆ ನೀರನ್ನು ಒದಗಿಸಿದರೆ, ಮಾಗಡಿ ಕೆರೆ 200 ಹೆಕ್ಟೇರ್, ತುಪ್ಪದಹಳ್ಳಿ ಕೆರೆ 460 ಹೆಕ್ಟೇರ್ ಹಾಗೂ ಗಡಿಮಾಕುಂಟೆ ಕೆರೆ 408ಕ್ಕೂ ಹೆಚ್ಚು ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಕಾಣಬಹುದಾಗಿದೆ.

ನಿತ್ಯ ಹರಿಬರುತ್ತದೆ ಪ್ರವಾಸಿಗರ ದಂಡು

ಜಗಳೂರು ತಾಲೂಕಿನ ಜೀವನಾಡಿ ಆಗಿರುವ ಸಂಗೇನಹಳ್ಳಿ ಕೆರೆ ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದಲ್ಲಿದ್ದು, ಇಲ್ಲಿಂದ ನಾಯಕನ ಹಟ್ಟಿ ತುರುವನೂರು ಭಾಗಕ್ಕೆ ನೀರನ್ನು ಒದಗಿಸಲಾಗುತ್ತದೆ. ಈ ಕೆರೆಯೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಇದನ್ನು ನೋಡಲು ಜನರು ಕಿಕ್ಕಿರಿದು ಬರುತ್ತಲೇ ಇರುತ್ತಾರೆ. ಚಿತ್ರದುರ್ಗಗದ ಮಾರ್ಗವಾಗಿ ಬಂದರೆ ಸುಮಾರು 25 ಕಿಲೋ ಮೀಟರ್‌ ಆಗಲಿದ್ದು, ರಾಷ್ಟ್ರೀಯ ಹೆದ್ದಾರಿ 13ರ ಎಡಭಾಗದಲ್ಲಿ ಇದನ್ನು ಕಾಣಬಹುದು. ಇನ್ನು ಹೊಸಪೇಟೆ ಮಾರ್ಗದಿಂದ ಬರುವವರಿಗೆ ಇದು ರಾಷ್ಟ್ರೀಯ ಹೆದ್ದಾರಿ 13ರ ಬಲಭಾಗಕ್ಕೆ ಕಾಣಸಿಗುತ್ತದೆ. ಹೊಸಪೇಟೆ, ಬಳ್ಳಾರಿ ಹೀಗೆ ಹಲವಾರು ಪ್ರವಾಸಿಗರು ಕೆರೆಯ ಸೌಂದರ್ಯವನ್ನು ಸವಿಯಲು ಆಗಮಿಸುತ್ತಾರೆ. ಈ ಕೆರೆ ಚಿತ್ರದುರ್ಗದ ಸಮೀಪವಿದ್ದರೂ ಕೂಡ ಈಗಲೂ ದಾವಣಗೆರೆ ಜಿಲ್ಲೆಗೆ ಸೇರಿರುವುದೇ ಒಂದು ವಿಶೇಷತೆ ಆಗಿದೆ ಎಂದೇ ಹೇಳಬಹುದು.

[t4b-ticker]

You May Also Like

More From Author

+ There are no comments

Add yours