ರಾಜ್ಯ ಅಪರೇಷನ್ ಹಸ್ತ ಜೋರು, ಬಿಜೆಪಿ ತೊರೆದ ಮಾಜಿ ಶಾಸಕರು

 

ಬೆಂಗಳೂರು, ಮಾರ್ಚ್‌ 07: ಮೇ ತಿಂಗಳು ಬರುವ ಒಳಗೆ ಕರ್ನಾಟಕ ಚುನಾವಣೆ ನಡೆಯಲಿವೆ. ಇನ್ನೇನು ದಿನಾಂಕಗಳು ಘೋಷಣೆ ಆಗಲಿವೆ. ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜನತಾದಳಗಳು ತೀವ್ರ ಪೈಪೋಟಿಯಲ್ಲಿ ತೊಡಗಿವೆ. ಇದೇ ವೇಳೆ, ಪಕ್ಷಾಂತರ ಪರ್ವ ಮುನ್ನೆಲೆಗೆ ಬಂದಿದೆ.

ರಾಜಕೀಯ ಪಕ್ಷಗಳಿಗೆ ಹೊಸದಾಗಿ ಸೇರ್ಪಡೆಗೊಳ್ಳುವವರ ಸಂಖ್ಯೆ, ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವವರ ಸಂಖ್ಯೆ ಹೆಚ್ಚುತ್ತಿದೆ. ‘ಆಪರೇಷನ್‌ ಕಮಲ’ದಂತೆ, ‘ಆಪರೇಷನ್‌ ಹಸ್ತ’ವೂ ಜೋರಾಗಿ ಸಾಗಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಭೆ ನಡೆಯಿತು. ಈ ವೇಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಸೇರಿದಂತೆ ಹಲವಾರು ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ, ಪಕ್ಷದ ನೂರಾರು ಕಾರ್ಯಕರ್ತರೂ ನೆರೆದಿದ್ದರು.

ಈ ಸಭೆಯಲ್ಲಿ ಬಿಜೆಪಿ ಮಾಜಿ ಶಾಸಕರಾದ ನಂಜುಂಡಸ್ವಾಮಿ, ಮನೋಹರ್ ಐನಾಪುರ ಅವರು ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಇವರೊಂದಿಗೆ ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಅವರೂ ಕಾಂಗ್ರೆಸ್‌ಗೆ ಸೇರಿದರು.

ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಿಕೆ ಶಿವಕುಮಾರ್‌, ‘ಬಿಜೆಪಿ ಮಾಜಿ ಶಾಸಕರಾದ ಕೊಳ್ಳೇಗಾಲದ ನಂಜುಂಡಸ್ವಾಮಿ, ಬಿಜಾಪುರದ ಮನೋಹರ್ ಐನಾಪುರ ಹಾಗೂ ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಶುಭ ಹಾರೈಸಿದೆ.’ ಎಂದು ತಿಳಿಸಿದ್ದಾರೆ. ತಮ್ಮ ಟ್ವೀಟ್‌ನೊಂದಿಗೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಂಎಲ್‌ಸಿ, ರಾಜ್ಯ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್, ಕರ್ನಾಟಕ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್‌, ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಂಸದ ಆರ್. ಧ್ರುವನಾರಾಯಣ, ಶಾಸಕ ರಾಜಶೇಖರ್ ಪಾಟೀಲ ಉಪಸ್ಥಿತರಿದ್ದರು.

ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ‘ಇಂದು ಮಾಜಿ ಶಾಸಕರಾದ ನಂಜುಂಡಸ್ವಾಮಿ ಹಾಗೂ ಮನೋಹರ ಐನಾಪುರ ಅವರು ಕಾಂಗ್ರೆಸ್‌ ಸೇರ್ಪಡೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಅಂದರೆ ಚುನಾವಣೆ ಬರುವುದರೊಳಗೆ ಬೇರೆ ಪಕ್ಷಗಳಲ್ಲಿರುವ ಹಾಲಿ ಶಾಸಕರು ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ. ಆದಷ್ಟೂ ಬೇಗನೇ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ’ ಎಂದು ತಿಳಿಸಿದ್ದಾರೆ.

ಕೊಳ್ಳೆಗಾಳ ಶಾಸಕ ನಂಜುಂಡಸ್ವಾಮಿ ಅವರು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮನೋಹರ ಐನಾಪುರ ಅವರು ನಾಗಠಾಣ ಕ್ಷೇತ್ರದಿಂದ ಶಾಸಕರಾಗಿದ್ದರು. ಪುರುಷೋತ್ತಮ ಅವರು ಮೈಸೂರಿನ ಮಾಜಿ ಮೇಯರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಮೆಚ್ಚಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಇವರಿಂದ ಪಕ್ಷವು ಮತ್ತಷ್ಟು ಗಟ್ಟಿಗೊಳ್ಳಲಿದೆ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಾವು ಈ ಚುನಾವಣೆಯನ್ನು ಸ್ಪಷ್ಟ ಬಹುಮತದಿಂದ ಗೆಲ್ಲಲಿದ್ದೇವೆ. ಹಿಂದಿನ ಆಂತರಿಕ ಸಮೀಕ್ಷೆಯಲ್ಲಿ 130 ರಿಂದ 136 ಸ್ಥಾನಗಳು ಬರಲಿವೆ ಎಂದು ತಿಳಿಬಂದಿತ್ತು. ಆದರೆ, ಈಗಿನ ಸಮೀಕ್ಷೆಯಲ್ಲಿ 140 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ ಎಂಬುದಾಗಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಆದಷ್ಟು ಬೇಗನೇ ಚುನಾವಣೆ ನಡೆಸಲು ಬಿಜೆಪಿಯವರು ಮುಂದಾಗಿದ್ದಾರೆ. ಬೇಗನೇ ಚುನಾವಣೆ ನಡೆದರೆ ನಾವು ಜಯಗಳಿಸಲಿದ್ದೇವೆ ಎಂಬ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ. ಈ ಹಿನ್ನೆಲೆಯಲ್ಲಿ ಬೇಗಬೇಗನೇ ಟೆಂಡರ್‌ ಪಾಸ್‌ ಮಾಡುತ್ತಿದ್ದಾರೆ. ಅವರು ಯಾವಾಗ ಬೇಕಾದರೂ ಚುನಾವಣೆ ನಡೆಸಲಿ. ಗೆಲ್ಲುವುದು ಮಾತ್ರ ನಾವೇ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours