ಅಭಿವೃದ್ಧಿ ಕಾರ್ಯಗಳೆ ನನ್ನ ಗೆಲುವಿಗೆ ಶ್ರೀರಕ್ಷೆ ಎಚ್.ಆಂಜನೇಯ

 

ಹೊಳಲ್ಕೆರೆ.ಮೇ.3*

ಕಾಂಗ್ರೆಸ್‍ನಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ ಎಂಬ ಅರಿವು ಮತದಾರರಿಗೆ ಬಂದಿದ್ದು, ಪಕ್ಷದ ಗೆಲುವಿಗೆ ಇದು ಪೂರಕವಾಗಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಹೆಚ್.ಡಿ.ಪುರ ಜಿಪಂಯ ತೇಕಲವಟ್ಟಿ, ಉಪ್ಪರಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಮತಪ್ರಚಾರದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ಅಭ್ಯರ್ಥಿಪರ ಮತ ಕೇಳುವ ಅರ್ಹತೆ ಇಲ್ಲದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಬಿಜೆಪಿಗರಿಗೆ ಮತ ಕೇಳಲು ಬೇರೆ ಯಾವುದೇ ವಿಚಾರಗಳು ಇಲ್ಲ. ಕಾಂಗ್ರೆಸ್ ಪಕ್ಷ ಮಾತ್ರ ಮತ ಕೇಳುವ ಅರ್ಹತೆ ಹೊಂದಿದೆ.ನಾನು ಸಚಿವನಾಗಿ ಮಾಡಿದ ಕಾರ್ಯಗಳೆ ಈ ಬಾರಿ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆ ಅಗಲಿದೆ ಎಂದು ಹೇಳಿದರು.

ದೇಶದ ರಾಜಕೀಯ ಇತಿಹಾಸದುದ್ದಕ್ಕೂ ಕಾಂಗ್ರೆಸ್ ಪಕ್ಷ ಮತ್ತು ಅದರ ನೇತಾರರಿಗೆ ಮಾತ್ರ ಈ ದೇಶದ ಜನರ ಬವಣೆ, ನಿರುದ್ಯೋಗ, ಬಡತನ ನಿವಾರಣೆ ಮಾಡುವುದು ಹಾಗೂ ಸಾಮಾಜಿಕ ಸಾಮರಸ್ಯ ಕಾಪಾಡುವುದು, ಸಾಮಾಜಿಕ ಮತ್ತು ಆರ್ಥಿಕ ಭಧ್ರತೆಗಳನ್ನು ಜನರಿಗೆ ಕೊಡಮಾಡುವುದು ಸಾಧ್ಯವಾಗಿದೆ. ಹಾಲಿ ಕೇಂದ್ರದಲ್ಲಿರುವ ಮೋದಿ ಸರ್ಕಾರ ಸುಳ್ಳಿನ ಸರಮಾಲೆಯನ್ನೇ ಧರಿಸಿಕೊಂಡು ಜನರನ್ನು ಸತತ 9 ವರ್ಷಗಳಿಂದಲೂ ವಂಚಿಸುತ್ತಾ ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರವು ಕೇಂದ್ರ ಮತ್ತು ರಾಜ್ಯದ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಬಡವರಿಗೆ ವಸತಿ ಕಲ್ಪಿಸಿಲ್ಲ. ವೃದ್ಧರಿಗೆ ಮಾಸಾಶನ ನೀಡುವುದು ಸೇರಿದಂತೆ ಅನೇಕ ಯೋಜನೆಗಳಿಗೆ ಹಣ ನೀಡದೇ ದಿವಾಳಿಯಾಗಿದೆ ಎಂದರು.

ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಅಭಿವೃದ್ಧಿ ಕೆಲಸಗಳನ್ನು ಮಾಡಿ ಮತಕೇಳುತ್ತಿದೆ. ಬಿಜೆಪಿ ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುತ್ತಿದೆ. ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಜಾರಿಯಾದ ನೂರಾರು ಅಭಿವೃದ್ಧಿ ಕೆಲಸಗಳು ಇಂದಿಗೂ ಕಣ್ಮುಂದೆ ಇವೆ. ಶಾಸಕ ಎಂ.ಚಂದ್ರಪ್ಪನ ದುರ್ವತನೆಗೆ ಬೇಸತ್ತಿದ್ದು ಮತದಾರರೆಲ್ಲರೂ ಅವರನ್ನು ಸೋಲಿಸಿ ಎಚ್.ಆಂಜನೇಯ ಅವರನ್ನು ಗೆಲ್ಲಿಸಲು ಸರ್ವ ಸನ್ನದ್ದಧರಾಗಬೇಕಿದೆ ಎಂದರು.
ಸಿದ್ಧರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ನೋಡಿದರೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದವು. ಆದರೀಗ ಡಬಲ್ ಇಂಜಿನ್ ಸರ್ಕಾರವಿದ್ದರೂ ಅಭಿವೃದ್ಧಿ ಕೆಲಸಗಳು ಎಲ್ಲೂ ಕಾಣುತ್ತಿಲ್ಲ. ಹೀಗಾಗಿ ಮತದಾರರು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಅರಿತು ಮತ ನೀಡಬೇಕು ಮನವಿ ಮಾಡಿದರು.

ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಈಗಿನ ಡಬಲ್ ಇಂಜಿನ ಸರ್ಕಾರ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆಗಳನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಆಡಳಿತದ ಅವಧಿಯಲ್ಲಿ ಹಿಂದುಳಿದ ವರ್ಗ, ದಲಿತರು ಹಾಗೂ ಎಲ್ಲ ವರ್ಗದ ಜನರ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್.ಆಂಜನೇಯರವರು ಸಾವಿರಾರು ಕೋಟಿ ಅನುದಾನ ತಂದು ಹೊಳಲ್ಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತಕೊಂಡೊಯ್ಯಲು ಎಚ್.ಆಂಜನೇಯ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಸದಸ್ಯರಾದ ಡಿ.ಕೆ.ಶಿವಮೂರ್ತಿ, ಇಂದಿರಾ ಕಿರಣ್, ಕಾಂಗ್ರೆಸ್ ಓಬಿಸಿ ರಾಜ್ಯ ಉಪಾಧ್ಯಕ್ಷ ಕಿರಣ್‍ಕುಮಾರ್ ಯಾದವ್, ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಡಿ.ರಂಗಯ್ಯ, ಮುಖಂಡರಾದ ವೈಶಾಖ್ ಯಾದವ್, ಮೂರ್ತಪ್ಪ, ದ್ಯಾಮಣ್ಣ, ಮಹಾಲಿಂಗಪ್ಪ, ಏಕಾಂತಪ್ಪ, ಮೂಡಲಗಿರಿಯಪ್ಪ, ರಾಜಣ್ಣ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours