ಸಿದ್ದು ಸಿಎಂ ಡಿಕೆಶಿ ಡಿಸಿಎಂ ಕರ್ನಾಟಕದಲ್ಲಿ ಜೋಡೆತ್ತು ಸರ್ಕಾರ

 

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಈ ಮೂಲಕ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಆಯ್ಕೆ ನಾಟಕಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಶನಿವಾರದಂದು 12-30 ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕೆ.ಸಿ.ವೇಣುಗೋಪಲ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಭಾನುವಾರ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ, ಸಿಎಂ ಆಯ್ಕೆ ದೆಹಲಿಗೆ ಶಿಫ್ಟ್ ಆಗಿತ್ತು. ಸೋಮವಾರವೇ ಸಿದ್ದರಾಮಯ್ಯ ದೆಹಲಿಗೆ ತೆರಳಿ ತಮ್ಮ ರಾಜಕೀಯ ದಾಳಗಳನ್ನು ಉರುಳಿಸಿದ್ದರು.

ಮತ್ತೊಂದೆಡೆ ಸೋಮವಾರ ಅನಾರೋಗ್ಯದ ಕಾರಣ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ  ಡಿಕೆಶಿ   ಮಂಗಳವಾರ ದೆಹಲಿಗೆ ತೆರಳಿ ಸಿಎಂ ಕುರ್ಚಿಗಾಗಿ ಕಸರತ್ತು ನಡೆಸಿದ್ದರು. ಶಾಸಕರ ಅಭಿಪ್ರಾಯದಂತೆ ಸಿಎಂ ಆಯ್ಕೆ ಮಾಡುವುದಕ್ಕೆ ಡಿಕೆಶಿ ವಿರೋಧಿಸಿದ್ದು, ಕೆಪಿಸಿಸಿ ಅಧ್ಯಕ್ಷರನ್ನು ಸಿಎಂ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಈ ಮೂಲಕ ಸಿಎಂ ಘೋಷಣೆ ಸಾಧ್ಯವಾಗಲಿಲ್ಲ.

ಬುಧವಾರ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೆವಾಲಾ, ವೇಣುಗೋಪಾಲ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸುದೀರ್ಘ ಚರ್ಚೆ ಮಾಡಿದ್ದರು. ಇಬ್ಬರೂ ನಾಯಕರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದ ಕಾರಣ ಸಿಎಂ ಆಯ್ಕೆ ಹೈಕಮಾಂಡ್‌ಗೆ ಕಗ್ಗಂಟಾಗಿತ್ತು, ಬುಧವಾರ ಸಂಜೆ ಡಿಕೆಶಿ ಮತ್ತು ಸಿದ್ದರಾಮಯ್ಯ ಜೊತೆ ಮಲ್ಲಿಕಾರ್ಜುನ ಖರ್ಗೆ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದರು.

ಇಬ್ಬರ ಜೊತೆ ಚರ್ಚೆ ಮಾಡಿದ ಬಳಿಕ  ರಾಹುಲ್ ಗಾಂಧಿ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಖರ್ಗೆ ತೀರ್ಮಾನಿಸಿದ್ದರು. ಕಾಂಗ್ರೆಸ್ ಸಿಎಂ ಆಯ್ಕೆ ಪ್ರತಿಪಕ್ಷಗಳಿಗೆ ಟೀಕಾ ವಿಚಾರ ಆಗುವುದು ಎನ್ನುವದನ್ನು ಅರಿತ ನಾಯಕರು, ಬೇಗನೆ ಸಿಎಂ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಿದ್ದರು. ಅದೇ ಕಾರಣಕ್ಕೆ ಇಂದು ಸಿಎಂ ಹೆಸರು ಘೋಷಿಸಲಾಗಿದೆ. ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡಿದ ಬಳಿಕ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಖಚಿತವಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಪ್ರಮಾಣವಚನ

ಮೇ 20ರ ಮಧ್ಯಾಹ್ನ 2.30 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ ಏಳು ಗಂಟೆಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತ ಘೋಷಣೆಯಾಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಪ್ರಮುಖ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಸಿದ್ದು ನಿವಾಸಕ್ಕೆ ಬಿಗಿ ಭದ್ರತೆ

ಮುನ್ನೆಚ್ಚರಿಕಾ ಕ್ರಮವಾಗಿ ಸಿದ್ದರಾಮಯ್ಯ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಬೆಂಗಳೂರಿನ ಕುಮಾರಕೃಪಾ ಬಳಿ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಹಾಕಲಾಗಿದೆ. ಸಿದ್ದರಾಮಯ್ಯ ಹೆಸರು ಘೋಷಣೆಯಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಸೇರುತ್ತಾರೆ ಎನ್ನುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿ ನಿಯೋಜಿಸಲಾಗಿದೆ.

ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ

ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರೆಯಲಿದ್ದಾರೆ. ಇನ್ನು ಯಾವ ಖಾತೆ ಬೇಕು ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ಡಿಕೆಶಿಗೆ ಹೈಕಮಾಂಡ್ ಹೇಳಿದ್ದು, ಇಂಧನ ಮತ್ತು ನೀರಾವರಿ ಖಾತೆಯನ್ನು ಡಿಕೆಶಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

[t4b-ticker]

You May Also Like

More From Author

+ There are no comments

Add yours