ಬುದ್ದ ಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸತೀಶ್ ಜಾರಕಿಹೊಳಿ, ಸತೀಶ್ ನಡೆದ ಬಂದ ಹಾದಿ

 

ಬೆಂಗಳೂರು, ಮೇ.20: ರಾಜ್ಯದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಯಮನಕನಮರಡಿ ಅಲ್ಲಿನ ಶಾಸಕ ಸತೀಶ್ ಜಾರಕಿಹೊಳಿ ಅವರಿಂದ ಮತ್ತಷ್ಟು ಪ್ರಸಿದ್ಧವಾಗಿದೆ. 2008, 2013 ಮತ್ತು 2018 ರಲ್ಲಿ ನಡೆದ ಹಿಂದಿನ ಮೂರು ಚುನಾವಣೆಗಳಲ್ಲಿ ಸತೀಶ್ ಜಾರಕಿಹೊಳಿ ಗೆಲುವು ಸಾಧಿಸಿದ್ದು, ಈ ಬಾರಿಯ ಚುನಾವಣೆಯಲ್ಲೂ ಭರ್ಜರಿ ಜಯ ಗಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವೆ ಜೊತೆಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸರೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ಸಚಿವ ಸಂಪುಟ ಸೇರಿದ್ದಾರೆ.

ರಾಜ್ಯ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಸತೀಶ್ ಜಾರಕಿಹೊಳಿ, ಅಹಿಂದ ಸಂಘಟನೆ ಮೂಲಕ ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸತೀಶ್‌ ಜಾರಕಿಹೊಳಿ ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ಅವರ ತಂದೆ ಲಕ್ಷ್ಮಣ ರಾವ್‌ ಜಾರಕಿಹೊಳಿ ಕಬ್ಬು ಬೆಳೆಗಾರರು ಹಾಗೂ ಉದ್ಯಮಿ.

ವಾಲ್ಮೀಕಿ ಸಮುದಾಯದಲ್ಲಿ ಜನಿಸಿದ ಸತೀಶ್‌ ಅವರಿಗೆ ನಾಲ್ಕು ಜನ ಸಹೋದರರಿದ್ದಾರೆ. ಅದರಲ್ಲಿ ಮೂವರು ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಹಿರಿಯ ಸಹೋದರ ರಮೇಶ್‌ ಜಾರಕಿಹೊಳಿ, ಕಿರಿಯ ಸಹೋದರ ಬಾಲಚಂದ್ರ ಜಾರಕಿಹೊಳಿ ಹಾಗೂ ಕೊನೆಯ ಸಹೋದರ ಲಖನ್‌ ಜಾರಕಿಹೊಳಿ.

ಸತೀಶ್ ಜಾರಕಿಹೊಳಿ ಅವರು ಮೌಢ್ಯ ವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಮಾನವ ಬಂಧುತ್ವ ವೇದಿಕೆಯನ್ನು ಸ್ಥಾಪಿಸಿ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಮಾನವೀಯ ಮೌಲ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳ ಆಧಾರದಲ್ಲಿ ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುತ್ತದೆ.

ಸತೀಶ್‌ ಜಾರಕಿಹೊಳಿ ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಅವರೂ ಸಹ ರಾಜಕಾರಣ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. 2000 ರಲ್ಲಿ ಖಂಡಸಾರಿ ಸಕ್ಕರೆ ಉತ್ಪಾದನಾ ಘಟಕವನ್ನು ಆರಂಭಿಸಿದ ಸತೀಶ್‌, ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡವರು. 2016ರಲ್ಲಿ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್‌ ಹೆಸರಿನಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಿದರು. ಮೂರನೇ ಸಕ್ಕರೆ ಕಾರ್ಖಾನೆಯನ್ನು ಯರಗಟ್ಟಿ ಶುಗರ್ಸ್ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ಅಡಿಯಲ್ಲಿ ನಿರ್ಮಿಸುವ ಕಾರ್ಯವು ಚಾಲ್ತಿಯಲ್ಲಿದೆ.

ರಾಜಕೀಯ ಪ್ರವೇಶ

ಈ ಎಲ್ಲ ಕಾರ್ಖಾನೆಗಳು ಸತೀಶ್‌ ಶುಗರ್ಸ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಕ್ಕರೆ ಉದ್ಯಮದಲ್ಲಿ ಯಶಸ್ಸು ಕಂಡ ಸತೀಶ್ ಜಾರಕಿಹೊಳಿ ಅವರು 1998 ರಿಂದ 2004ರ ತನಕ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದರು. 2004 ರಿಂದ 2008ರ ವರೆಗೆ ಮತ್ತೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಧರಂಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು.

2008ರಲ್ಲಿ ಜನತಾದಳದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು, ಅಹಿಂದ ವರ್ಗಗಳನ್ನು ಸಂಘಟಿಸುವುದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. 2013ರಲ್ಲಿ 2ನೇ ಬಾರಿಗೆ ಯಮನಕನಮರಡಿ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿಯೂ ಯಮನಕನಮರಡಿಯಿಂದಲೇ ಶಾಸಕರಾಗಿ ಆಯ್ಕೆಯಾದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದು ಭದ್ರಕೋಟೆಯನ್ನಾಗಿಸಿಕೊಂಡಿದ್ದಾರೆ.

2013ರಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ, ಸಣ್ಣ ಕೈಗಾರಿಕಾ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. 22 ಡಿಸೆಂಬರ್ 2018 ರಿಂದ 23 ಜುಲೈ 2019 ರ ವರೆಗೆ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಈಗ ಮತ್ತೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾರೆ.

[t4b-ticker]

You May Also Like

More From Author

+ There are no comments

Add yours