ಮಂಗಳೂರು: 16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ ಸರ್ವಜ್ಞನ ಜಯಂತಿ ಆಚರಣೆಯು ಫೆ. 20ರಂದು ರಾಜ್ಯದ್ಯಂತ ನಡೆಯಲಿದೆ.
ಹಾವೇರಿ ಜಿಲ್ಲೆಯ ಅಬಲೂರು ಎಂಬಲ್ಲಿ ಜನ್ಮ ತಾಳಿರುವ ಸರ್ವಜ್ಞ, ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ. ಈ ಹಿನ್ನೆಲೆಯಲ್ಲಿ ಸರಕಾರ ಸರ್ವಜ್ಞ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಣೆಗೆ ತಂದಿದ್ದು, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಕುಲಾಲ-ಕುಂಬಾರ ಸಮುದಾಯದ ನಾಯಕರುಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.





