ಶಿವಮೊಗ್ಗ: ಇಂದು ಕುಂಬಾರ ಜನಾಂಗ ರಾಜ್ಯ ಜಿಲ್ಲೆ ತಾಲೂಕು ಮಟ್ಟಗಳಲ್ಲಿ ಒಗ್ಗಟ್ಟು ಆಗಿ ಅಲ್ಲಲ್ಲಿ ಸರಕಾರದ ಬ್ಯಾನರ್ ಅಡಿಯಲ್ಲಿ ಸೇರಲು ಕಾರಣ ನಾವೆಲ್ಲಾ ಹೋರಾಟದಿಂದ ಪಡೆದ ಸರ್ವಜ್ಞ ಜಯಂತಿ ಎಂದು ಪ್ರತಿಷ್ಠಿತ ದೇವರಾಜ್ ಅರಸು ರಾಜ್ಯ ಪುರಸ್ಕಾರ ಹಾಗು ಡಾ. ಬಿ.ಸಿ ರಾಯ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಸಮಾಜ ವಿಜ್ಞಾನಿ, ಕುಂಬಾರ ಸಮುದಾಯದ ಹಿರಿಯ ನಾಯಕ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅಭಿಪ್ರಾಯ ಪಟ್ಟರು.
ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನ ಪಡೆಯಲು ಹೋರಾಟ ಮಾಡಿದ ಎಲ್ಲಾ ಕುಂಬಾರ ಕುಲಾಲ ಸಂಘ ಸಂಸ್ಥೆಗಳು ನಾಯಕರುಗಳು ಅಭಿನಂದನಾರ್ಹರು. ಅಂತೆಯೇ ನಮ್ಮ ನೋವನ್ನ ಆಲಿಸಿ ಸರ್ಕಾರದ ಮಟ್ಟದಲ್ಲಿ ಜಾರಿಗೆ ತರಲು ಕಾರಣರಾದ ಎಲ್ಲಾ ಮುಖ್ಯ ಮಂತ್ರಿಗಳಿಗೆ, ರಾಜಕೀಯ ನಾಯಕರುಗಳಿಗೆ ನಾವು ಆಬಾರಿ ಆಗಿರಬೇಕು. ಜನತಾದಳದ ನಾಯಕ ಚಿಂತಕ, ಪ್ರೊ. ಲಕ್ಷ್ಮೀ ಸಾಗರ ಬಳಿಕ ಕುಂಬಾರ ಸಮುದಾಯದ ಯಾವುದೇ ಒಬ್ಬರಿಗೆ ಕಾಂಗ್ರೆಸ್ ಬಿಜೆಪಿ ದಳ ಸಾಮಾಜಿಕ ನ್ಯಾಯದ ನೆಲೆಯಲ್ಲಿ ಧ್ವನಿ ಇಲ್ಲದ ಸಮುದಾಯಕ್ಕೆ ಧ್ವನಿ ಕೊಡುವ ಕೆಲಸ ಮಾಡಿಲ್ಲ. ಕುಂಭ ನಿಗಮ, ಸರ್ವಜ್ಞ ಪ್ರಾಧಿಕಾರ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿವೆ. ಕುಂಬಾರರಿಗೆ ಶಾಸಕ ಸಂಸದ ಸ್ಥಾನ ಕೊಡುವ ಮಾತು ಬಿಡಿ, ನಿಗಮ ಮಂಡಳಿ ಕೊಟ್ಟಿಲ್ಲ. ರಾಷ್ಟ್ರದಲ್ಲಿ 8 ಕೋಟಿ ಇರುವ ಕುಂಬಾರರು, ರಾಜ್ಯದಲ್ಲಿ ಸುಮಾರು 20 ಲಕ್ಷ ಇದ್ದೇವೆ, ಆದರೆ ಸಾಮಾಜಿಕ ನ್ಯಾಯದ ನೆಲೆಯಲ್ಲಿ ವಿಧಾನ ಪರಿಷತ್ ಅಥವಾ ರಾಜ್ಯ ಸಭೆಗೆ ನಾಮಕರಣ ಮಾಡುವಲ್ಲೂ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಸೋತಿವೆ. ಈ ಬಾರಿಯ ಎಲ್ಲಾ ಚುನಾವಣೆಗಳಲ್ಲಿ ಕುಂಬಾರ ನಾಯಕರುಗಳು ಸಂಘ ಸಂಸ್ಥೆಗಳು ಎಲ್ಲಾ ಪಕ್ಷಗಳ ಜನಪ್ರತಿಧಿಗಳಿಗೆ ನೇರವಾಗಿ ಇದನ್ನ ಹೇಳಿ ಹಕ್ಕೊತ್ತಾಯ ಮಾಡಲೇ ಬೇಕಾದ ಅವಾರ್ಯತೆ ಇದೆ ಎಂದರು. ಸ್ಥಳೀಯ ಹಿರಿಯ ನಾಯಕರು, ಸಂಘಟನೆ ಮುಖಂಡರು ಹಾಗೂ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.





