ಡಾ ಹೆಗ್ಗಡೆಯವರ ರಾಜ್ಯಸಭಾ ನಿಧಿಯ ರೂ. 2 ಕೋಟಿ ವೆಚ್ಚದಲ್ಲಿ ಕಾಮಗಾರಿ ಶಿಲಾನ್ಯಾಸ-ಸಿರಿ ಕೆಫೆ-ಸಿರಿ ಮಳಿಗೆ ಉದ್ಘಾಟನೆ
ಬೆಳ್ತಂಗಡಿ: ಗ್ರಾಮದ ಅಗತ್ಯತೆ ಮತ್ತು ಗ್ರಾಮೀಣ ಜನರ ಜೀವನ ಸ್ಥಿತಿಗತಿ ಬಗ್ಗೆ ಗ್ರಾಮಾಭಿವೃದ್ದಿ ಯೋಜನೆ ಮೂಲಕ ನಿತ್ಯ ವರದಿ ಬರುತ್ತಿದ್ದು, ಇದರಂತೆ ಇಲ್ಲಿಂದ ೮೦೦ ಕಿ.ಮೀ. ದೂರದ ಬೀದರ್ ಜಿಲ್ಲೆಯ ಸ್ಥಿತಿ ಕುರಿತು ಮಾಹಿತಿ ದೊರೆತ ಕಾರಣ ಅಲ್ಲಿಯ ಜನರ ಜೀವನ ಸುಧಾರಣೆ ಅಗಬೇಕು ಎನ್ನುವುದು ನನ್ನ ಭಾವನೆ ಆಗಿತ್ತು. ಅದಕ್ಕಾಗಿ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೀದರ್ ಜಿಲ್ಲೆಗೆ ಹೈನುಗಾರಿಕೆಗೆ 10 ಕೋಟಿ ರೂ. ಬಳಕೆ ಮಾಡಿದ್ದು ಇದರಿಂದ ನಿತ್ಯ 18 ಸಾವಿರ ಲೀಟರ್ ಉತ್ಪತ್ತಿಯಾಗುತ್ತಿದ್ದ ಹಾಲು ಪ್ರಸ್ತುತ ಒಂದು ಲಕ್ಷದ ನಲುವತ್ತು ಸಾವಿರ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಇದೇ ರೀತಿ ಜನರ ಜೀವನ ಮಟ್ಟ ಸುಧಾರಣೆ ಅಗತ್ಯತೆ ಮನಗಂಡು ಮುಂದೆಯೂ ರಾಜ್ಯಸಭಾ ನಿಧಿ ಬಳಸಲಾಗುವುದು ಎಂದು ರಾಜ್ಯಸಭಾ ಸಂಸದ, ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೋಮವಾರ ರಾಜ್ಯಸಭಾ ಸಂಸದರಾದ ಡಾ. ವೀರೇಂದ್ರ ಹೆಗ್ಗಡೆಯವರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರುಗೊಂಡಿರುವ ರೂ. ೨ ಕೋ.ರೂ. ಅನುದಾನದಡಿ ಬೆಳ್ತಂಗಡಿ ನಗರದ ಕೆಇಬಿ-ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ-ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ತಾಲೂಕಿನ ಕೆಲವು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗೆ ರಾಜ್ಯಸಭಾ ನಿಧಿಯನ್ನು ಬಳಸಲಾಗಿದೆ. ಗ್ರಾಮಾಭಿವೃದ್ದಿ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಬೆಳಕು ಬಂದರೆ, ಸಿರಿ ಸಂಸ್ಥೆಯಿಂದ ಸಾವಿರಾರು ಮಂದಿಗೆ ಉದ್ಯೋಗ ದೊರಕಿದೆ. ಮುಂದೆಯೂ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವಂತೆ ಮಾಡಲಾಗುವುದು. ಇಲ್ಲಿನ ಶಾಸಕರ, ಪಟ್ಟಣ ಪಂಚಾಯಿತಿ ಅಧ್ಯಕ್ಷರ ,ಸದಸ್ಯರ ಬೇಡಿಕೆಯಂತೆ ಜನರ ಅನುಕೂಲಕ್ಕಾಗಿ ಈ ರಸ್ತೆಗೆ 2 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಡಾ ಹೆಗ್ಗಡೆಯವರು ತಮ್ಮ ರಾಜ್ಯಸಭಾ ನಿಧಿಯಡಿ ಬೆಳ್ತಂಗಡಿ ಅಯ್ಯಪ್ಪ ಮಂದಿರ ಬಳಿಯಿಂದ ಹುಣ್ಸೆಕಟ್ಟೆ ವರೆಗಿನ ರಸ್ತೆ ಅಭಿವೃದ್ದಿಗೆ 2 ಕೋಟಿ ರೂ. ನೀಡುವ ಮೂಲಕ ಉಪ್ಪಿನಂಗಡಿ- ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ ಗುರುವಾಯನಕರೆಯಲ್ಲಿ ಟ್ರಾಫಿಕ್ ಸಮಸ್ಯೆ ಬಂದಾಗ ಈ ಸಂಪರ್ಕ ರಸ್ತೆ ಸಾವಿರಾರು ಜನರಿಗೆ ಅನುಕೂಲವಾಗಿದೆ. ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಡಾ ಹೆಗ್ಗಡೆಯವರು ತಮ್ಮ ರಾಜ್ಯಸಭಾ ನಿಧಿಯಿಂದ 10 ಕೋಟಿ ರೂ. ಅನುದಾನ ನೀಡಿ ಸಾವಿರಾರು ಕುಟುಂಬಗಳ ಆರ್ಥಿಕ ಬೆಳವಣಿಗೆ ಕಾರಣವಾಗಿದ್ದಾರೆ. ಇದರಿಂದ ದೇಶದಲ್ಲಿ ಸಂಸದರ ನಿಧಿ ವಿನಿಯೋಗ ಹೇಗೆ ಮಾಡಬಹುದೆಂದು ಡಾ. ಹೆಗ್ಗಡೆಯವರು ಕೆಲಸ ಮಾಡಿ ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಸಿರಿ ಸಂಸ್ಥೆಯಲ್ಲಿ ಒಂದು ಸಾವಿರ ಸಿಬ್ಬಂದಿಗಳು ಇದ್ದಾರೆ. ಮಹಿಳೆಯರಿಗೆ ಉದ್ಯೋಗ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಪಟ್ಟಣ ಪಂಚಾಯತ್ ಗೆ ಅನುದಾನಗಳ ಕೊರತೆ ಇದ್ದ ಸಂದರ್ಭದಲ್ಲಿ ರಸ್ತೆಗೆ ಎರಡು ಕೋಟಿ ಅನುದಾನ ನೀಡಿ ನಗರ ಪಂಚಾಯತ್ ಗೆ ಶಕ್ತಿ ತುಂಬಿದ್ದಾರೆ. ಇದಕ್ಕಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರ ಪರವಾಗಿ ಡಾ.ಹೆಗ್ಗಡೆಯವರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿಉದ್ಯಮಿ ಶಶಿಧರ ಶೆಟ್ಟಿ ಬರೋಡ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್., ಸಿರಿ ಸಂಸ್ಥೆ ಟ್ರಸ್ಟಿ ರಾಜೇಶ್ ಪೈ ಉಜಿರೆ, ಪ.ಪಂ. ಮುಖ್ಯಾಧಿಕಾರಿ ರಾಜೇಶ್, ಸಿರಿ ಸಂಸ್ಥೆ ಸಿಇಒ ಪ್ರಸನ್ನ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಜನಾರ್ದನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸಿರಿ ಗೋದಾಮು ವಿಭಾಗದ ಮ್ಯಾನೇಜರ್ ಜೀವನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರ್ಷಕ್ಕೆ 5 ಕೋ. ಅನುದಾನ
ಸಂಸದರ ನಿಧಿಯನ್ನು ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಆದ್ಯತೆ ಮೇರೆಗೆ ಬಳಕೆ, ಅಲ್ಲಿನ ಹಾಲು ಸೊಸೈಟಿಗಳಿಗೆ 10 ಕೋ. ಅನುದಾನ ನೀಡಲಾಗಿದ್ದು, ಜಿಲ್ಲೆಯಲ್ಲಿ ದಿನಕ್ಕೆ ಒಂದು ಲಕ್ಷ ಲೀ. ಹಾಲು ಉತ್ಪಾದನೆ ಆಗುತ್ತಿದೆ. ಡಾ. ಹೆಗ್ಗಡೆಯವರ ಕಾರ್ಯಕ್ಕಾಗಿ ರಾಷ್ಟ್ರಪತಿಯವರಿಂದ ಶ್ಲಾಘನೆ ಕೂಡ ಲಭಿಸಿದೆ .ಬೆಳ್ತಂಗಡಿ-ಹುಣ್ಸೆಕಟ್ಟೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿಗೆ 2 ಕೋ.ರೂ. ಅನುದಾನ ಬಿಡುಗಡೆ. ಧರ್ಮಸ್ಥಳದ ಅಶೋಕ ನಗರದಲ್ಲಿ ರಸ್ತೆ, ಮೂಲಭೂತ ಸೌಕರ್ಯಕ್ಕಾಗಿ ೨.೪೧ ಕೋ. ಅನುದಾನ. 140 ಕ್ಕೂ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ೧.೮೩ ಕೋ. ರೂ. ಬಿಡುಗಡೆ. ಇಷ್ಟರ ವರೆಗೆ ೧೬.೭೪ ಕೋ. ರೂ. ಅನುದಾನ ಬಿಡುಗಡೆ ಆಗಿದೆ.
- ಕೆ ಎನ್. ಜನಾರ್ದನ್
ರಾಜ್ಯಸಭಾ ಸದಸ್ಯ ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ





