ಬೆಲೆ ಏರಿಕೆ, ಭ್ರಷ್ಟಚಾರ ಡಬಲ್ ಇಂಜಿನ್ ಸರ್ಕಾರದ ಸಾಧನೆ: ಮಾಜಿ ಸಚಿವ ಹೆಚ್.ಆಂಜನೇಯ

 

 

*ಹೊಳಲ್ಕೆರೆ ಕ್ಷೇತ್ರದಲ್ಲಿ ಕೆರೆ ಹೂಳೆತ್ತುವಲ್ಲಿ ಅವ್ಯವಹಾರ*

*ಎಚ್.ಆಂಜನೇಯ ಪರ ಒಲವು, ಶಾಸಕರಲ್ಲಿ ನಡುಕ*

*ಕೆಪಿಸಿಸಿ ಸದಸ್ಯ ಎಸ್.ಎಂ.ಎಲ್.ತಿಪ್ಪೇಸ್ವಾಮಿ ಹೇಳಿಕೆ*

*ಭರಮಸಾಗರ ಹೋಬಳಿಯಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ*

ಭರಮಸಾಗರ ಏ. 9
ಒಂದು ಕಡೆ ಮಿತಿ ಮೀರಿದ ಭ್ರಷ್ಟಾಚಾರ, ಮತ್ತೊಂದೆಡೆ ಅಗತ್ಯ ವಸ್ತುಗಳಾದ ಸಿಲಿಂಡರ್, ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಮಾಡಿರುವುದೇ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಸಾಧನೆ ಎಂದು ಕೆಪಿಸಿಸಿ ಸದಸ್ಯ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಂ.ಎಲ್.ತಿಪ್ಪೇಸ್ವಾಮಿ ದೂರಿದರು.
ಭರಮಸಾಗರ ಹೋಬಳಿ ವ್ಯಾಪ್ತಿಯ ಬಹದ್ದೂರಘಟ್ಟ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಗಳಲ್ಲಿ ಮಾತನಾಡಿದರು.
ಸಿಲಿಂಡರ್ ಕೊಳ್ಳಲು ಆಗದೇ ಬಡ, ಮಧ್ಯಮ ವರ್ಗದ ಜನ ಕಣ್ಣೀರು ಜೊತೆಗೆ ಬಿಜೆಪಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಹಿಂದೆಂದೂ ಕಂಡರಿಯದ ರೀತಿ ಜನರ ಬದುಕು ಬೀದಿಗೆ ಬಿದ್ದಿದೆ, ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೂ ಬಿಜೆಪಿ ಸರ್ಕಾರಕ್ಕೆ ಜನರ ಸಂಕಷ್ಟ ಅರಿವಿಗೆ ಬಂದಿಲ್ಲ ಎಂದರು.

ಹಣ ಲೂಟಿ ಹೊಡೆಯುವುದರಲ್ಲಿ ಮುಳುಗಿದೆ. ಇದಕ್ಕೆ ಗುತ್ತಿಗೆದಾರ ಸಂಘದ ಪತ್ರ, ಕೆಲ ಗುತ್ತಿಗೆದಾರರ ಆತ್ಮಹತ್ಯೆಯೇ ಸಾಕ್ಷಿ ಆಗಿದೆ. ಇಷ್ಟೇಲ್ಲ ಆದರೂ ಭ್ರಷ್ಟಾಚಾರ ನಿಲ್ಲಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿಲ್ಲ ಎಂದು ದೂರಿದರು.

ಇನ್ನೂ ದುರಹಾಂಕರದ ಮಾತನ್ನಾಡುವ ಕ್ಷೇತ್ರದ ಶಾಸಕ ಚಂದ್ರಪ್ಪ, ಕೆರೆ-ಕಟ್ಟೆಗಳ ಹೂಳು ಎತ್ತುವಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದು, ತನಿಖೆ ನಡೆಸುವಂತೆ ಪಕ್ಷ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ ಎಂದರು.

ಕಳೆದ ಬಾರಿ ಪಕ್ಷದಲ್ಲಿನ ಕೆಲವರ ಅಸಮಾಧಾನದಿಂದ ಕಾಂಗ್ರೆಸ್ ಸೋತಿದ್ದು, ಈ ಬಾರಿ ನಾವೆಲ್ಲರೂ ಒಗ್ಗೂಡಿ ಆಂಜನೇಯ ಅವರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಿಕೊಳ್ಳಲು ಮುಂದಾಗಿದ್ದೇವೆ.‌ ಅದರಲ್ಲೂ ಕ್ಷೇತ್ರದ ಜನ, ಶಾಸಕರ ಅಹಂಕಾರಕ್ಕೆ ಬೇಸತ್ತು, ಆಂಜನೇಯ ಅವರ ಪರ ಹೆಚ್ಚು ಒಲವು ತೋರುತ್ತಿದ್ದಾರೆ. ಇದು ಅವರಲ್ಲಿ ನಡುಕ ಉಂಟು ಮಾಡಿದೆ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕ್ಷೇತ್ರದ ಶಾಸಕರು ಬಾಯಿ ಬಿಟ್ಟರೇ ಬಚ್ಚಲು ಭಾಷೆ ಬಳಸುತ್ತಾರೆ. ಇದರಿಂದ ಅಧಿಕಾರಿಗಳು, ಗುತ್ತಿಗೆದಾರರು, ಜನಸಾಮಾನ್ಯರು ನೊಂದಿದ್ದಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಎಷ್ಟು ಕೆರೆಗಳು ಇವೆ ಎಂಬ ಮಾಹಿತಿ ಇಲ್ಲದ ಚಂದ್ರಪ್ಪ, ಮುನ್ನೂರು ಕೆರೆ ಅಭಿವೃದ್ಧಿಪಡಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದು, ಈ ಸಂಬಂಧ ತಾಕತ್ತು ಇದ್ದರೇ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಈಗಾಗಲೇ ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ಯೋಜನೆ ರೂಪಿಸಿದೆ. ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಗ್ಯಾರಂಟಿ ಕಾರ್ಡ್ ವಿತರಣೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದರು.

ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣಮೂರ್ತಿ ಮಾತನಾಡಿ, 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.99ರಷ್ಟನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ. ಈಗಲೂ ನೀಡಿರುವ ವಾಗ್ದಾನ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.

ಹೊಳಲ್ಕೆರೆ ಕ್ಷೇತ್ರದಲ್ಲಿ ಶಾಸಕರು ಯಾವುದೇ ಸಾಧನೆ ಮಾಡಿಲ್ಲ. ಈಗಲೂ ಹಳೇ ಸುಳ್ಳನ್ನು ಹೊಸ ರೀತಿ‌ ಹೇಳುತ್ತಿದ್ದಾರೆ. ತನ್ನ ಭ್ರಷ್ಟಚಾರ ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು

ಕೋಗುಂಡೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಹದ್ದೂರ್ ಘಟ್ಟ ತಿಪ್ಪೇಸ್ವಾಮಿ, ಇತರೆ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

 

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಕಾಶ್, ತಾಂಡಾ ನಿಗಮದ ಮಾಜಿ ಅಧ್ಯಕ್ಷ ಅನಿಲ್, ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಕಿರಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ದುರುಗೇಶ್ ಪೂಜಾರ್, ಮುಖಂಡರಾದ ಚೌಲೀಹಳ್ಳಿ ನಾಗೇಂದ್ರಪ್ಪ, ಸಾಹುಕಾರ್ ಹನುಮಂತಪ್ಪ, ಕಲ್ಲೇಶ್, ಚಿದಾನಂದಪ್ಪ ರೇಣುಕಾರಾಧ್ಯ ವೀರಭದ್ರಪ್ಪ, ನಾಗರಾಜ್, ಹರೀಶ್, ಬಸವರಾಜ್, ಮತ್ತಿತರರಿದ್ದರು.

ಫೋಟೋ ಭರಮಸಾಗರ ಹೋಬಳಿ ಬಹದ್ದೂರ್ ಘಟ್ಟದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮತಪ್ರಚಾರ ನಡೆಸಿದರು.

[t4b-ticker]

You May Also Like

More From Author

+ There are no comments

Add yours