ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪ್ರಚೋದನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್ಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಪೋಸ್ಟ್ ಮಾಡಿದ ಕಿಡಿಗೇಡಿಗಾಗಿ ಶೋಧ ನಡೆಸುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಘಟನೆ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿರುವ ಉಳ್ಳಾಲ ಪೊಲೀಸರು, ಕಮೆಂಟ್ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಲು ಶೋಧ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಧಾರ್ಮಿಕ ದ್ವೇಷ ಹುಟ್ಟಿಸುವ, ಭಯ ಹುಟ್ಟಿಸುವ ರೀತಿಯ ಪೋಸ್ಟ್ಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಸೈಬರ್ ಕ್ರೈಂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಅದೇ ರೀತಿ, ನಗರದ ಶಾಂತಿಗೆ ಭಂಗ ತರುವ ರೀತಿಯಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಮಾಡಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಶಬ್ದ ಬಳಸಿ ಪೋಸ್ಟ್ ಮಾಡಿದ್ದ ಗುಂಪಿನ ವಿರುದ್ಧ ಕೆಲವು ತಿಂಗಳ ಹಿಂದೆ ನಗರ ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಸೈಬರ್ ಪೊಲೀಸರು ಪ್ರತ್ಯೇಕ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಮೂಲಕ ನಿರಂತರ ನಿಗಾ ಇರಿಸಿದ್ದಾರೆ. ಕೇವಲ ಪೋಸ್ಟ್ ಮಾಡಿದವರಷ್ಟೇ ಅಲ್ಲದೆ, ಅಂತಹ ಪೋಸ್ಟ್ಗಳನ್ನು ಲೈಕ್ ಮಾಡುವ, ಶೇರ್ ಮಾಡುವ ಅಥವಾ ಪ್ರಚೋದನಕಾರಿ ಕಮೆಂಟ್ ಹಾಕುವವರ ವಿರುದ್ಧವೂ ಐಟಿ ಕಾಯ್ದೆ ಹಾಗೂ ಬಿಎನ್ಎಸ್ (BNS) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.





