ವೇಣೂರು: ವೇಣೂರು ಗ್ರಾ.ಪಂ. ವ್ಯಾಪ್ತಿಯ ಕರಿಮಣೇಲು ಗ್ರಾಮದ ರಾಜ್ಯಹೆದ್ದಾರಿ ಶಾಂತಿನಗರ ಕಿರುಸೇತುವೆಯಡಿ ರಾಶಿರಾಶಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬರುತ್ತಿದ್ದು, ಪಂಚಾಯತ್ನ ನಿರ್ಮಲ ಗ್ರಾಮದ ಪರಿಶ್ರಮಕ್ಕೆ ಸವಾಲು ಎಸೆದಂತಿದೆ.
ಹೇಳಿಕೇಳಿ ವೇಣೂರು ಗ್ರಾ.ಪಂ. ವ್ಯಾಪ್ತಿಯು ಕಸ ವಿಚಾರದಲ್ಲಿ ಹೆಚ್ಚಿನ ಭಾಗಗಳಲ್ಲಿಯೂ ಸ್ವಚ್ಛತೆ ಕಂಡು ಬರುತ್ತಿದೆ. ವ್ಯವಸ್ಥಿತ ತ್ಯಾಜ್ಯ ವಿಲೇವಾರಿ ಘಟಕವೂ ಕಾರ್ಯಚರಿಸುತ್ತಿದ್ದು, ಪ್ರತೀ ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸಿ ವ್ಯವಸ್ಥಿತವಾಗಿ ವಿಲೇವಾರಿಯನ್ನೂ ಮಾಡುತ್ತಿದೆ. ಅಲ್ಲದೆ ಅಂಗಡಿ ಮಾಲಿಕರಿಗೆ ಕಸ ವಿಚಾರದಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನೂ ಮಾಡುತ್ತಿದೆ. ಕಸ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿರುವ ಪಂಚಾಯತ್ ಕಸ ಹಾಕುವವರ ಮೇಲೆ ದಂಡ ಪ್ರಯೋಗಕ್ಕೂ ಮುಂದಾಗಿದೆ. ಇದೂ ಅಲ್ಲದೆ ಕಸ ಹಾಕುವವರ ಮಾಹಿತಿ ನೀಡಿದವರಿಗೆ ದಂಡದ ಮೊತ್ತದಲ್ಲಿ ಹಣವನ್ನೂ ಪ್ರೋತ್ಸಾಹಕವಾಗಿ ನೀಡುವ ಯೋಜನೆ ಬಗ್ಗೆಯೂ ಪಂಚಾಯತ್ ಹೇಳಿ ಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಸಂಸೆ ವ್ಯಕ್ತವಾಗಿದೆ.
ಆದರೆ ಇದೀಗ ಶಾಂತಿನಗರದ ಸೇತುವೆಯ ಬಳಿ ಪ್ಲಾಸ್ಟಿಕ್ ತ್ಯಾಜ್ಯಗಳು ಒಣಗಿರುವ ನದಿಯಲ್ಲಿ ಕಂಡು ಬಂದಿದೆ. ಮೇಲ್ನೋಟಕ್ಕೆ ಇದು ಪ್ರತೀದಿನ ಯಾರೋ ತಂದು ಸುರಿಯುತ್ತಿರುವಂತೆ ಗೋಚರವಾಗುತ್ತಿದೆ. ಪಂಚಾಯತ್ ಈ ಬಗ್ಗೆ ಗಮನ ಹರಿಸಿ ಸ್ಥಳೀಯರಿಗೆ ಜಾಗೃತಿ ಮತ್ತು ಎಚ್ಚರಿಕೆ ನೀಡಬೇಕಾಗಿ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಹೆದ್ದಾರಿಯಲ್ಲಿ ಚಲಿಸುವ ಪ್ರಜ್ಞಾವಂತ ನಾಗರಿಕರು, ವಾಹನಗಳಲ್ಲಿ ಚಲಿಸುವ ಅಧಿಕಾರಿ ವರ್ಗದವರು ಪಂಚಾಯತ್ನ ಕಾಳಜಿ ಬಗ್ಗೆ ಅಸಹ್ಯ ಪಡುವಂತಾಗಬಹುದು.





