ನಿಷ್ಪಕ್ಷಪಾತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿ:ಡಿಸಿ ದಿವ್ಯ ಪ್ರಭು ಜಿ.ಆರ್.ಜೆ ಸೂಚನೆ

 

ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ
*****************
ಚಿತ್ರದುರ್ಗ (ಕರ್ನಾಟಕ ವಾರ್ತೆ) ಮಾರ್ಚ್28:
ಚುನಾವಣಾ ಕಾರ್ಯದಲ್ಲಿ ಯಾವುದೇ ದೂರುಗಳು ಬಾರದಂತೆ, ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ  ಚುನಾವಣಾ ತರಬೇತಿ ನಿರ್ವಹಣಾ ಕೋಶದ ಅಡಿಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಚುನಾವಣಾ ಕರ್ತವ್ಯಗಳು, ಜವಾಬ್ದಾರಿಗಳು, ಚುನಾವಣಾ ಮಾದರಿ ನೀತಿ ಸಂಹಿತೆ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ವಿಶೇಷ ಜಾಗೃತದಳದ ಅಧಿಕಾರಿಗಳು, ಎಫ್‍ಎಸ್‍ಟಿ, ವಿಎಸ್‍ಟಿ, ವಿವಿಟಿ, ಎಂಸಿಸಿ ಮತ್ತು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸಹಾಯಕ ವೆಚ್ಚ ಉಸ್ತುವಾರಿ ಅಧಿಕಾರಿಗಳಿಗೆ ರಾಜ್ಯಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಂಡಿದ್ದ ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ, ನಿರ್ಭಿತಿಯಿಂದ ನಡೆಸಲು ಎಲ್ಲರೂ ಸಹಕರಿಸಿ, ತಮಗೆ ವಹಿಸಿದ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಯಾವುದೇ ಸಮಸ್ಯೆ ಇಲ್ಲದಂತೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಚುನಾವಣಾ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಚುನಾವಣೆ ಕಾರ್ಯದಲ್ಲಿ ವಿವಿಧ ತಂಡಗಳ ಪಾತ್ರ ಏನು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.  ಮುಕ್ತ, ನ್ಯಾಯಸಮ್ಮತ, ಗೊಂದಲವಿಲ್ಲದೆ, ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನ ತಂಡ ಪ್ರಮುಖವಾಗಿದೆ. ಇದರ ಅಡಿಯಲ್ಲಿ ಸಂಚಾರಿ ಹಾಗೂ ಸ್ಥಿರ ಕಣ್ಗಾವಲು ತಂಡಗಳು ಕಾರ್ಯನಿರ್ವಹಿಸುತ್ತವೆ. ಸಂಚಾರಿ ಹಾಗೂ ಸ್ಥಿರ ಕಣ್ಗಾವಲು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಸಿಆರ್‍ಪಿಸಿ 103 ಅಡಿ ಕಾರ್ಯನಿರ್ವಾಹಕ ದಂಡಾಧಿಕಾರಿಯ ಅಧಿಕಾರವನ್ನು ನೀಡಲಾಗಿದೆ.  ಈ ಅಧಿಕಾರಿಗಳು ಚುನಾವಣಾ ಅಕ್ರಮಗಳು ಕಂಡುಬಂದರೆ, ಅವುಗಳನ್ನು ತಡೆಯಲು ಶೋಧನೆ ಹಾಗೂ ವಸ್ತುಗಳನ್ನು ಜಪ್ತಿ ಮಾಡಬಹದು. ಈ ಅಧಿಕಾರದ ಜೊತೆಗೆ ಜವಾಬ್ದಾರಿಯೂ ಇದೆ. ಮತದಾರರ ಓಲೈಕೆಗೆ ಕಾನೂನು ಬಾಹಿರವಾಗಿ ಹಣ, ವಸ್ತುಗಳನ್ನು ಹಂಚುವುದನ್ನು ತಡೆಯುವುದು ಹೆಚ್ಚು ಸವಾಲಿನ ಕೆಲಸವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 35 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿ ಹಣ, ಮದ್ಯ ಹಾಗೂ ಜನರಿಗೆ ಹಂಚಲು ತಂದ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯು ನೆರೆಯ ರಾಜ್ಯದ ಅನಂತಪುರ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿದೆ. 8 ಅಂತರರಾಜ್ಯ ಚೆಕ್ ಪೋಸ್ಟ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 35 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.  ನೆರೆಯ ರಾಜ್ಯದಿಂದ ಚುನಾವಣೆ ಅಕ್ರಮಗಳಿಗೆ ಹಣ, ಮದ್ಯ ಹಾಗೂ ವಸ್ತುಗಳು ಚೆಕ್ ಪೋಸ್ಟ್ ದಾಟಿ ರಾಜ್ಯದ ಒಳಗೆ ಬಂದರೆ ಸಂಬಂಧಪಟ್ಟ ಚೆಕ್‍ಪೋಸ್ಟ್‍ಗಳಲ್ಲಿ ನಿಯೋಜಿಸಲಾದ ಸ್ಥಿರ ಕಣ್ಗಾವಲು ಅಧಿಕಾರಿಗಳು ಹಾಗೂ ತಂಡದ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಚುನಾವಣಾ ಕರ್ತವ್ಯಕ್ಕೆ ಯಾವುದೇ ಕಾರಣಕ್ಕೂ ಗೈರು ಹಾಜರಾಗಬಾರದು. ಚುನಾವಣಾ ಕರ್ತವ್ಯದಲ್ಲಿ ಅಶಿಸ್ತು ಕಂಡುಬಂದಲ್ಲಿ ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಹಾಗಾಗಿ ಅಂತಹ ಕ್ರಮಕ್ಕೆ ಆಸ್ಪದ ನೀಡದೇ ಬದ್ಧತೆಯಿಂದ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ವಿಡಿಯೋ, ಸಾಕ್ಷ್ಯಕ್ಕೆ ಬಹಳ ಮುಖ್ಯವಾಗಿರುವುದರಿಂದ ವಿಎಸ್‍ಟಿ ಮತ್ತು ವಿವಿಟಿ ತಂಡ ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಎಫ್‍ಎಸ್‍ಟಿ ಮತ್ತು ವಿವಿಟಿ ತಂಡ ಕಾರ್ಯಕ್ರಮದ ಸ್ಥಳಕ್ಕೆ ಮುಂಚಿತವಾಗಿಯೇ ತೆರಳಬೇಕು. ಈ ಕುರಿತು ವಿಡಿಯೋ ಗ್ರಾಫರ್‍ಗಳಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಎಂಸಿಸಿ ತಂಡದ ನೋಡಲ್ ಅಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಕರ್ತವ್ಯಗಳು, ಜವಾಬ್ದಾರಿಗಳು, ಚುನಾವಣಾ ಮಾದರಿ ನೀತಿ ಸಂಹಿತೆ ಕುರಿತು ಆರ್.ಓ, ಎಆರ್‍ಓ, ಸೆಕ್ಟರ್ ಅಧಿಕಾರಿಗಳು, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ, ವಿವಿಟಿ,  ಅಕೌಂಟ್ ಟೀಂ ಸೇರಿದಂತೆ ವಿವಿಧ ತಂಡಗಳಿಗೆ ತರಬೇತಿ ನೀಡಲಾಗುತ್ತಿದ್ದು, ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯದ ಕುರಿತು ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದು, ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾತನಾಡಿ, ಚುನಾವಣಾ ಯಶಸ್ವಿಯಲ್ಲಿ ಅಧಿಕಾರಿಗಳ ಕರ್ತವ್ಯ ಪ್ರಮುಖವಾಗಿದೆ. ಚುನಾವಣೆ ಕೆಲಸದ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಬೇಕು. ಏಕ ಗವಾಕ್ಷಿ ಯೋಜನೆಯಡಿ ಎಲ್ಲಾ ಪಕ್ಷಗಳು ಸಭೆ, ಸಮಾರಂಭ, ರ್ಯಾಲಿ, ಮೆರವಣಿಗೆ ನಡೆಸಲು ಅನುಮತಿ ಪಡೆಯಲು ಅರ್ಜಿ ಸಲ್ಲಿಸುತ್ತಾರೆ. ಇವುಗಳನ್ನು ನಿಷ್ಪಕ್ಷಪಾತವಾಗಿ ಪ್ರಥಮ ಬಂದವರಿಗೆ ಪ್ರಥಮ ಆದ್ಯತೆ ಮೇಲೆ ಅನುಮತಿ ನೀಡಬೇಕು ಎಂದು ಸಲಹೆ ನೀಡಿದರು.
ಬೇರೆ ಬೇರೆ ರಾಜಕೀಯ ಪಕ್ಷಗಳು ಸಮಾವೇಶಗಳು ನಡೆಯಲು ಮೈದಾನ ಹಂಚಿಕೆ ಮಾಡುವಾಗ ಗೊಂದಲಕ್ಕೆ ಅವಕಾಶ ನೀಡಬಾರದು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲೂ ಸಮಯ ಹಂಚಿಕೆಯಲ್ಲಿ ಗೊಂದಲ ಉಂಟಾಗಿ ಘರ್ಷಣೆಗಳು ನಡೆಯವುದನ್ನು ತಪ್ಪಿಸಬೇಕು. ಇದಕ್ಕಾಗಿ ನೇಮಿಸಿದ ಪೊಲೀಸ್ ನೋಡಲ್ ಅಧಿಕಾರಿಗಳೊಂದಿಗೆ ಮ್ಯಾಜಿಸ್ಟ್ರೇಟ್ ಹಾಗೂ ಚುನಾವಣೆ ಅಧಿಕಾರಿಗಳು ಸಮಾಲೋಚನೆ ನಡೆಸಬೇಕು. ಚುನಾವಣೆ ಅಕ್ರಮ, ಜಪ್ತಿಗೆ ಸಂಬಂಧಿಸಿದಂತೆ ಸಂಚಾರಿ ಹಾಗೂ ಸ್ಥಿರ ಕಣ್ಗಾವಲು ಹಾಗೂ ಸೆಕ್ಟರ್ ಅಧಿಕಾರಿಗಳೇ ಸ್ಪಷ್ಟವಾಗಿ ದೂರು ನೀಡಬೇಕು.
ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಎನ್.ರಾಜು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಎರಡು ತರಬೇತಿ ಹಾಗೂ ರಾಜ್ಯ ಚುನಾವಣಾ ಆಯುಕ್ತರು ವಿಡಿಯೋ ಕಾನ್ಪರೆನ್ಸ್ ಮೂಲಕ ಒಂದು ಬಾರಿ ತರಬೇತಿ ನೀಡಿದ್ದಾರೆ. ಇದೀಗ ಹೆಚ್ಚುವರಿಯಾಗಿ ವಿಶೇಷವಾಗಿ  ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ತಂಡಗಳಿಗೆ ತರಬೇತಿ ನೀಡುವ ಸಲುವಾಗಿ ಚುನಾವಣಾ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ, ನಿರ್ಭಿತಿಯಿಂದ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಈ ನಿಟ್ಟಿನಲ್ಲಿ ತಮಗೆ ವಹಿಸಿದ ಕಾರ್ಯಗಳನ್ನು ನಿರ್ಭೀತಿಯಿಂದ ಮಾಡಿದಾಗ ಜಿಲ್ಲೆಯ ವಿಧಾನಸಭಾ ಚುನಾವಣೆ ಯಶಸ್ವಿಯಾಗಲು ಸಾಧ್ಯವಿದೆ. ಹಾಗಾಗಿ ಎರಡು ದಿನಗಳ ಕಾಲ ಚುನಾವಣಾ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಎನ್.ವಿ.ಶಿರಗಾಂವಕರ್ ಅವರು ವಿವಿಧ ತಂಡಗಳ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಾದ ರಮೇಶ್ ಕುಮಾರ್, ಆನಂದ್, ತಿಮ್ಮಪ್ಪ, ಮಹೇಂದ್ರ ಕುಮಾರ್, ವಿವೇಕಾನಂದ, ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಮಧುಸೂಧನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ಚುನಾವಣಾ ಸಿಬ್ಬಂದಿ ಇದ್ದರು.
=======

[t4b-ticker]

You May Also Like

More From Author

+ There are no comments

Add yours