ಮಿತಿ ಮೀರಿದ ಟೋಲ್ ಕಲೆಕ್ಷನ್ ಗೆ ತಿರುಗಿ ಬಿದ್ದ ಜನ

ಮಿತಿ ಮೀರಿದ ಟೋಲ್ ಕಲೆಕ್ಷನ್ ಗೆ ತಿರುಗಿ ಬಿದ್ದ ಜನ

Listen to this article

ಬೆಂಗಳೂರು,ಮಾ.೧೪: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ(ದಶಪಥ) ನಲ್ಲಿ ಸುಂಕ ವಸೂಲಾತಿ ಇಂದಿನಿಂದ ಆರಂಭವಾಗಿದ್ದು, ರಸ್ತೆ ಕಾಮಗಾರಿ ಸಂಪೂರ್ಣಗೊಳ್ಳದೆ ಸುಂಕ ವಸೂಲಾತಿ ಮಾಡುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಹಲವೆಡೆ ಜೆಡಿಎಸ್, ಕಾಂಗ್ರೆಸ್ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸುಂಕ ವಸೂಲಾತಿ ಸಂಗ್ರಹ ಕೇಂದ್ರದ ಗೇಟ್‌ಗಳ ಪ್ರತಿಭಟನಾಕಾರರು ಧ್ವಂಸ ಮಾಡಿದ್ದಾರೆ.
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೇ ಸುಂಕ ವಸೂಲಾತಿ ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಿದೆ. ಇದನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದೆ.
ರಸ್ತೆಯ ಮಧ್ಯೆಯೇ ಹಾಲಿನ ಕ್ಯಾನ್‌ಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಲಾಗುತ್ತಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ,
ಕಾಮಗಾರಿಗಳು ಸಂಪೂರ್ಣಗೊಂಡಿಲ್ಲ, ಜತೆಗೆ ಸುಂಕ ವಸೂಲಾತಿಗೂ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಸದ್ಯಕ್ಕೆ ಸುಂಕ ವಸೂಲಾತಿ ಬೇಡ, ಕಾಮಗಾರಿಗಳು ಪೂರ್ಣವಾದ ನಂತರ ಸುಂಕ ವಸೂಲಾತಿ ಮಾಡಿ ಎಂದು ಪ್ರತಿಭಟಕಾರರು ಒತ್ತಾಯಿಸಿದ್ದಾರೆ.
ಸುಂಕ ವಸೂಲಾತಿ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಸುಂಕ ವಸೂಲಾತಿ ಕೇಂದ್ರದ ಬಳಿ ಪ್ರತಿಭಟನೆ ಮಾಡುತ್ತಿದ್ದು, ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.
ಅಲ್ಲದೇ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಿಕೆ ಬಳಿಯ ಟೋಲ್ ಪ್ಲಾಜಾ ಎದುರು  ವಕೀಲರ ಸಂಘದ ಮಾಜಿ ಅಧ್ಯಕ್ಷ ರಂಗನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.
ಬಗಿ ಬಂದೋಬಸ್ತ್ ಕೈಗೊಂಡಿರುವ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದಿದ್ದು ಮುಂಜಾಗ್ರತಾ ಕ್ರಮವಾಗಿ ರಸ್ತೆಯ ಅಕ್ಕಪಕ್ಕದ ಗ್ರಾಮಗಳ ಬಳಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಈ ನಡುವೆ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಸುಂಕ ವಸೂಲಾತಿ ಸಂಗ್ರಹಿಸಲಾಗುತ್ತಿದ್ದು, ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಸುಂಕ ವಸೂಲಾತಿ ಸಂಗ್ರಹಿಸಲಾಗುತ್ತಿದೆ.ಸುಂಕ ವಸೂಲಾತಿ ಸಂಗ್ರಹ ಆರಂಭವಾದ ಮೊದಲ ದಿನವೇ ಬೆಳ್ಳಂ ಬೆಳಗ್ಗೆಯೇ ಸುಂಕ ವಸೂಲಾತಿ ಸಿಬ್ಬಂದಿ ವಿರುದ್ಧ ವಾಹನ ಸವಾರರು ಸಿಡಿಮಿಡಿಗೊಂಡು ಆಕ್ರೋಶ ವ್ಯಕ್ತಪಡಿಸಿದರು.ಇನ್ನು ಸುಂಕ ವಸೂಲಾತಿ ಸಂಗ್ರಹ ಮಾಡಲು ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ.ತಾಂತ್ರಿಕ ತೊಂದರೆ ಎದುರಾಗತೊಡಗಿದೆ ಫಾಸ್ಟ್ಯಾಗ್ ಇದ್ದರೂ ಟೋಲ್ ಪ್ಲಾಜಾ ಸ್ಕ್ಯಾನ್ ತೆಗೆದುಕೊಳ್ಳುತ್ತಿಲ್ಲ.

 

 

ಸ್ಕ್ಯಾನ್ ಆಗುವುದರಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಟೋಲ್ ಕಂಬಿ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸ್ಕ್ಯಾನ್ ಆಗಿ ವಾಹನ ಚಲಿಸುವಾಗಲೇ ವಾಹನದ ಮೇಲೆ ಕಂಬಿ ಬೀಳುತ್ತಿದೆ. ಹೀಗಾಗಿ ವಾಹನ ಚಾಲಕರು ಗರಂ ಆಗುತ್ತಿದ್ದಾರೆ. ಸಿದ್ಧತೆ ಮಾಡಿಕೊಳ್ಳದೇ ಯಾಕೆ ಸುಂಕ ವಸೂಲಾತಿ ಸಂಗ್ರಹಿಸುತ್ತೀರಾ ಎಂದು ಜಗಳ ತೆಗೆಯುತ್ತಿದ್ದಾರೆ.ಕಣಮಿಣಕೆ ಬಳಿ ಮಾತನಾಡಿದ ವಾಹನ ಸವಾರರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಸಿದ್ಧತೆಯಿಲ್ಲದೇ ಸುಂಕ ವಸೂಲಾತಿ ದರ ಸಂಗ್ರಹಿಸಲಾಗುತ್ತಿದೆ. ಸರಿಯಾದ ವ್ಯವಸ್ಥೆ ಇಲ್ಲ, ಟೋಲ್ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಟೋಲ್ ಕಂಬಿ ಕಾರಿನ ಮೇಲೆ ಬೀಳುತ್ತಿದೆ, ಗ್ಲಾಸ್ ಒಡೆದು ಹೋದರೆ ಏನು ಮಾಡಬೇಕು. ಮೊದಲು ಟೋಲ್ ವ್ಯವಸ್ಥೆ ಸರಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ರೈತ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ರಾಮನಗರಕ್ಕೆ ಹೋಗಬೇಕು. ಒಂದೇ ಬಾರಿಗೆ ೨೫೦ ರೂ ಸುಂಕ ಕಟ್ಟಬೇಕು. ಇಷ್ಟು ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.

ಯಾವುದಕ್ಕೆ ಎಷ್ಟು ಶುಲ್ಕ?
ಕಾರು, ಜೀಪ್, ವ್ಯಾನ್‌ಗೆ ಏಕಮುಖ ಸಂಚಾರಕ್ಕೆ ೧೩೫ ರೂ
ಕಾರು, ಜೀಪ್, ವ್ಯಾನ್‌ಗೆ ಎರಡು ಕಡೆ ಸಂಚಾರಕ್ಕೆ ೨೦೫ ರೂ.
ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ ೭೦ ರೂ. ನಿಗದಿ
ಕಾರು, ಜೀಪ್, ವ್ಯಾನ್‌ಗಳಿಗೆ ತಿಂಗಳ ಪಾಸ್ ದರ ೪,೪೨೫ ರೂ.
ಲಘು ಸರಕುವಾಹನ, ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ ೨೨೦ ರೂ
ಲಘು ಸರಕುವಾಹನ, ಮಿನಿ ಬಸ್‌ಗಳ ಎರಡು ಕಡೆ ಸಂಚಾರಕ್ಕೆ ೩೩೦ ರೂ.
ಲಘು ಸರಕುವಾಹನ, ಮಿನಿ ಬಸ್‌ಗಳಿಗೆ ತಿಂಗಳ ಪಾಸ್ ದರ ೭೩೧೫ ರೂ
ಟ್ರಕ್/ಬಸ್ ಏಕಮುಖ ಸಂಚಾರಕ್ಕೆ ಟೋಲ್ ದರ ೪೬೦ ರೂ.
ಟ್ರಕ್/ಬಸ್ ಎರಡು ಕಡೆ ಸಂಚಾರಕ್ಕೆ ೬೯೦ ರೂ
ಟ್ರಕ್/ಬಸ್‌ಗಳ ತಿಂಗಳ ಟೋಲ್ ಪಾಸ್ ದರ ೧೫,೩೨೫ ರೂ.
೩ ಆಕ್ಸೆಲ್ ವಾಣಿಜ್ಯ ವಾಹನ ಏಕಮುಖ ಸಂಚಾರ ೫೦೦, ಎರಡು ಕಡೆ ೭೫೦ ರೂ
ಅತಿ ಭಾರದ ವಾಹನಗಳು ಏಕಮುಖ ಸಂಚಾರಕ್ಕೆ ೮೮೦ ರೂ.
ಅತಿ ಭಾರದ ವಾಹನಗಳು ಎರಡು ಕಡೆ ಸಂಚಾರಕ್ಕೆ ೧೩೧೫ರೂ

Trending Now

Leave a Reply

Your email address will not be published. Required fields are marked *

Trending Now