ಹುಬ್ಬಳ್ಳಿ, ಏ. 8: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಲು ಸಾಲು ಲವ್ ಜಿಹಾದ್ ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದ್ದು, ತನ್ನ ಮಗಳನ್ನು ಮುಸ್ಲಿಂ ಸಮುದಾಯದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ಹಣ ಕೂಡಾ ತೆಗೆದುಕೊಂಡು ಹೋಗಿದ್ದಾನೆ. ಇದೀಗ ಹಣವೂ ಇಲ್ಲ, ಮಗಳೂ ಇಲ್ಲ ಎಂಬಂತಾಗಿದೆ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ತಾಯಿಯೊಬ್ಬಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಧಾರವಾಡದ ಕೆಲಗೇರಿಯ ನಿವಾಸಿ ಇಪ್ಪತ್ತೆರಡು ವರ್ಷದ ತಂಗೆಮ್ಮಾ ಎಂಬ ಯುವತಿ ಮನೆ ಎದುರಿನ ನಿವಾಸಿ ಕಾರು ಚಾಲಕನಾಗಿದ್ದ ಮುಸ್ಲಿಂ ವ್ಯಕ್ತಿಯ ಜೊತೆಗೆ ಓಡಿ ಹೋಗಿದ್ದಾಳಂತೆ. ಈ ಬಗ್ಗೆ ಆಕೆಯ ತಾಯಿ ಮಂಜುಳಾ ಅವರೇ ಮಾಹಿತಿ ನೀಡಿದ್ದು, ತಮ್ಮ ಮಗಳಿಗೆ ಪರಿಚಿತ ಯುವಕನ ಜೊತೆ ವಿವಾಹವಾಗಿತ್ತು. ಆದ್ರೆ ಮಗಳು ನಮ್ಮ ಜೊತೆಯೇ ಇದ್ದಳು. ಆಕೆಯ ಪತಿ ಆಗಾಗ ಬಂದು ಹೋಗುತ್ತಿದ್ದ. ಧಾರವಾಡದ ಕೆಲಗೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾಗ, ತಮಗೆ ವಕೀಲರೊಬ್ಬರು ಪರಿಚಯವಿದ್ದರು. ಅವರ ಕಾರ್ ಡ್ರೈವರ್ ಆಗಿ ಮುನ್ನಾ ಎಂಬಾತ ಕೆಲಸ ಮಾಡ್ತಿದ್ದ. ಆಗ ನಾವು ನಮಗೆ ಸ್ವಂತದೊಂದು ಮನೆ ಮಾಡಬೇಕು. ಹೀಗಾಗಿ ಮನೆ ಹುಡುಕಿ ಕೊಡಿ ಎಂದು ಮುನ್ನಾ ಮತ್ತು ವಕೀಲರಿಗೆ ಹತ್ತು ಲಕ್ಷ ಹಣ ನೀಡಿದ್ದೆವು. ಆ ಬಳಿಕ ವಕೀಲರು ಮತ್ತು ಮುನ್ನಾ ಆಗಾಗ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಆದರೆ 2023ರಲ್ಲಿ ನಾವು ಮನೆಯಲ್ಲಿ ಇಲ್ಲದ ಸಂದರ್ಭ ಮುನ್ನಾ ತಮ್ಮ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಧಾರವಾಡದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು. ಆಗ ಪೊಲೀಸರು ಮುನ್ನಾ ವಿರುದ್ದ ದೂರು ದಾಖಲಿಸಿಕೊಳ್ಳದೇ ಕೇವಲ ಮಿಸ್ಸಿಂಗ್ ಕಂಪ್ಲೇಟ್ ದಾಖಲಿಸಿಕೊಂಡಿದ್ದರು. ಆದ್ರೆ ಇಲ್ಲಿವರಗೆ ಮುನ್ನಾ ಮತ್ತು ತಮ್ಮ ಮಗಳು ಎಲ್ಲಿದ್ದಾರೆ ಎಂದು ಹುಡುಕಿಲ್ಲ ಎಂದು ಆರೋಪಿಸಿದ್ದಾರೆ.





