ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣ: ಸಚಿವ ಬಿ.ಶ್ರೀರಾಮುಲು

 

ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣ*
 *ಸಚಿವ ಬಿ.ಶ್ರೀರಾಮುಲು*
*********
ಚಿತ್ರದುರ್ಗ ಫೆ.11(ಕರ್ನಾಟಕ ವಾರ್ತೆ): ಒಂದು ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಮೊಳಕಾಲ್ಮುರು ಪಟ್ಟಣದ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ನಿರ್ಮಿಸಲಾಗುತ್ತಿರುವ ಮೊಳಕಾಲ್ಮುರು ನೂತನ  ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಗೂ ಶಿಲಾನ್ಯಾಸ ನೆರವೇರಿಸಿ‌ ಅವರು ಮಾತನಾಡಿದರು.
ಪಟ್ಟಣದಲ್ಲಿ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಬಹಳ ದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆ ಇಂದು ನೆರವೇರಿದೆ. ಬಸ್ ನಿಲ್ದಾಣಕ್ಕೆ ಬೇಕಾದ ಸರ್ಕಾರಿ ಜಮೀನು ಪಟ್ಟದಲ್ಲಿ ಇರಲಿಲ್ಲ. ಪಟ್ಟಣದ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿ ರಿ.ಸರ್ವೆ ನಂ. 104ರಲ್ಲಿರುವ 1 ಎಕರೆ 1 ಗುಂಟೆ ಜಾಗವನ್ನು ಕಂದಾಯ ಇಲಾಖೆಯಿಂದ ರೂ.5,87,407/- ಖರೀದಿಸಿ, ರೂ.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪಟ್ಟಣಕ್ಕೆ ಹೊಂದಿಕೊಂಡತೆ ರಾಯಪುರ ಗೇಟ್ ಬಳಿ ಕಂದಾಯ ಇಲಾಖೆ 6 ಎಕರೆ ಜಮೀನು ಖರೀದಿಸಿ ರೂ.8 ಕೋಟಿ ವೆಚ್ಚದಲ್ಲಿ ಬಸ್ ಘಟಕ ನಿರ್ಮಿಸಲಾಗುತ್ತದೆ. ಇದರಿಂದ ತಾಲೂಕಿನ ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದರು.
ಬಳ್ಳಾರಿ ಜನ್ಮ ಭೂಮಿ , ರಾಜಕೀಯವಾಗಿ ಪುನರ್ಜನ್ಮ ನೀಡಿದ ಮೊಳಕಾಲ್ಮೂರು ಕ್ಷೇತ್ರ ನನ್ನ ಕರ್ಮಭೂಮಿ.  ಮೊಳಕಾಲ್ಮೂರು ನನಗೆ ಪವಿತ್ರ ಸ್ಥಳ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ. ಪಟ್ಟಣದ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿದೆ. ಮಿನಿ ವಿಧಾನ ಸೌಧಕ್ಕೆ ರೂ.2 ಕೋಟಿ ಹೆಚ್ಚುವರಿ ಅನುದಾನ ನೀಡಿ ಪೂರ್ಣಗೊಳಿಸಲಾಗಿದೆ. ವಾಲ್ಮೀಕಿ ಭವನಕ್ಕೆ ರೂ.2 ಕೋಟಿ ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ ಎಸ್.ಸಿ‌. ಹಾಗೂ‌‌ ಎಸ್.ಟಿ. ಮೀಸಲಾತಿ ಹೆಚ್ಚಿಸಿದೆ. ಎಸ್.ಟಿ ಸಮುದಾಯದ ಶೇ.3 ರಷ್ಟು ಮೀಸಲಾತಿ‌ಯನ್ನು ಶೇ.7ಕ್ಕೆ ಹೆಚ್ಚಿಸಲಾಗಿದೆ. ಎಸ್.ಸಿ.ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಹೆಚ್ಚಿಸಲಾಗಿದೆ. ಶಾಸಕರ ಅನುದಾನದಲ್ಲಿ ಕ್ಷೇತ್ರದ 170 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿದೆ.  ವಸತಿ ರಹಿತ ಅಲೆಮಾರಿ ಸಮುದಾಯದ ಕುಟುಂಬಗಳಿಗೆ‌ ಹಕ್ಕುಪತ್ರ ನೀಡಿ 2500 ಮನೆಗಳ ನಿರ್ಮಿಸಲಾಗುತ್ತಿದೆ. ಮೊಳಕಾಲ್ಮೂರು ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಅಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದರು.
ಈ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ತುಂಗಭದ್ರಾ ಹಿನ್ನೀರು ನಿಂದ ನೀರು ತರಲಾಗುತ್ತಿದೆ. ರೂ.616 ಕೋಟಿ ಅನುದಾನ ನೀಡಿ, ಈ ಭಾಗದ 78 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಯೋಜನೆಯು‌ ಶೇ.99 ರಷ್ಟು ಪೂರ್ಣಗೊಂಡಿದ್ದು, ತಿಂಗಳ ಒಳಗಾಗಿ ಕೆರೆಗಳಿಗೆ ನೀರು ಹರಿಸಲಾಗುವುದು ಎಂಬ ಭರವಸೆಯನ್ನು ಸಚಿವ ಶ್ರೀರಾಮುಲು ವ್ಯಕ್ತಪಡಿಸಿದರು.
ಅನೇಕ ಅಪಾಯಕಾರಿ ತಿರುವುಗಳಿಂದ ಕೂಡಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದ ಹಿರಿಯೂರು ಹಾಗೂ ಬಳ್ಳಾರಿ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ.  ಈ ಭಾಗದ ಪ್ರಮುಖ ಧಾರ್ಮಿಕ ಕ್ಷೇತ್ರ ಎತ್ತಪ್ಪನ ಗುಡ್ಡಕ್ಕೆ ರೂ.1.25 ಕೋಟಿ ವೆಚ್ವದಲ್ಲಿ  ಮೆಟ್ಟಿಲು ನಿರ್ಮಿಸಲಾಗಿದೆ. ಇದರಿಂದ ಭಕ್ತಾದಿಗಳಿಗೆ ಅನುಕೂಲವಾಗಿದೆ.  ಬಹುದಿನದ ನಂತರ ವೇದಾವತಿ ನದಿಯಲ್ಲಿ 30 ಅಡಿ ನೀರು ಹರಿದಿದೆ. ಈ ಭಾಗದ ಬೋರ್ ವೆಲ್‌ಗಳು‌ ರೀಚಾರ್ಜ್ ಆಗಿವೆ. ಜನರಲ್ಲಿ ಹರ್ಷ ಇದೆ. ನಾಯಕ‌ನಹಟ್ಟಿ ಪಟ್ಟಣಕ್ಕೆ ಕುಡಿಯುವ ನೀರು ಸೌಲಭ್ಯ ಒದಗಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ನಿರ್ಮಿಸಲಾಗಿದೆ. ಕ್ಷೇತ್ರದಲ್ಲಿ ಡಿಎಂಎಫ್ ಅನುದಾನದಲ್ಲಿ ಸಿ.ಸಿ. ರಸ್ತೆ ನಿರ್ಮಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು‌ ಯೋಜನೆ ಜಾರಿಗೊಳಿಸಿ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗಿದೆ.  ಮೊಳಕಾಲ್ಮೂರು ಪಟ್ಟಣದಲ್ಲಿ  ಕ್ರೀಡಾಂಗಣ ನಿರ್ಮಾಣಕ್ಕೆ ಅನುಮತಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
[t4b-ticker]

You May Also Like

More From Author

+ There are no comments

Add yours