ಮಧ್ಯಪ್ರಾಚ್ಯ ಯುದ್ಧದಿಂದ ಮಂಗಳೂರಿನ ಡ್ರೈಫ್ರೂಟ್ಸ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಇರಾನ್ ಹಾಗೂ ಅಫ್ಘಾನಿಸ್ತಾನದಿಂದ ಖರ್ಜೂರ ಸೇರಿದಂತೆ ಒಣಹಣ್ಣುಗಳ ಆಮದು ಸ್ಥಗಿತಗೊಂಡಿದ್ದು, ಗೋವಾ, ಆಂಧ್ರ, ಕೇರಳ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಿಗೆ ಪೂರೈಕೆ ಸ್ಥಗಿತಗೊಂಡಿದೆ. ರಂಜಾನ್ ಸೀಸನ್ಗೆ ಪೂರೈಕೆ ಕೊರತೆಯಿಂದ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆಯೂ ಶೇ 15-20ರಷ್ಟು ಏರಿಕೆಯಾಗಿದೆ.
ಮಂಗಳೂರು, ಮಾ. 13: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ ಇದೀಗ ಭಾರತದ ಡ್ರೈಫ್ರೂಟ್ಸ್ ಉದ್ಯಮಕ್ಕೂ ತಟ್ಟಿದ್ದು, ವಿಶೇಷವಾಗಿ ಮಂಗಳೂರಿನ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಬೇಕಿದ್ದ ಖರ್ಜೂರ ಸೇರಿದಂತೆ ಹಲವು ಒಣಹಣ್ಣುಗಳ ಪೂರೈಕೆ ಅಡಚಣೆಗೆ ಒಳಗಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಶುರುವಾಗಿದೆ. ಮಂಗಳೂರಿನ ಬಂದರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಭಾರತದ ಪ್ರಮುಖ ಡ್ರೈಫ್ರೂಟ್ಸ್ ಆಮದು ಸಂಸ್ಥೆಯಾದ ‘ರೀಮ್ ಟ್ರೇಡರ್ಸ್’ ಸೇರಿದಂತೆ ಹಲವು ವ್ಯಾಪಾರಿಗಳು ಈಗ ಸಂಕಷ್ಟ ಎದುರಿಸುತ್ತಿದ್ದಾರೆ.





