ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಸಂಜೆ ವೇಳೆಗೆ ಅಕಾಲಿಕ ಮಳೆ ಸುರಿದಿದೆ. ಜಿಲ್ಲೆಯ ಸುಳ್ಯ, ಪುತ್ತೂರು ಸುತ್ತಮುತ್ತಲಿನ ಭಾಗದಲ್ಲಿ ಸಂಜೆ ಮಳೆಯಾಗಿದೆ. ಸಂಪಾಜೆ, ಕಬಕ, ವಿಟ್ಲ, ಬೆಟ್ಟಂಪಾಡಿ, ರೆಂಜ, ನಿಡ್ನಳ್ಳಿ, ಕೊಂದಲಕಾನ ಸೇರಿದಂತೆ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಅನೇಕ ಕೃಷಿಕರ ಮನೆಯಂಗಳದಲ್ಲಿ ಕೊಯಿಲಿನ ಅಡಿಕೆ ಇದ್ದು, ಮಳೆಗೆ ಒದ್ದೆಯಾಗಿದೆ.
ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ. ಬೆಳಗ್ಗೆ ತುಸು ಚಳಿ, ಮೋಡದಿಂದ ಕೂಡಿದ ವಾತಾವರಣ, ಮಧ್ಯಾಹ್ನ ವೇಳೆ ಸೆಕೆಯಿಂದ ಕೂಡಿದೆ. ಬಿಸಿಲಿನ ಬೇಗೆಯೂ ಏರಿಕೆ ಕಾಣುತ್ತಿದ್ದು, ತಾಪಮಾನದಲ್ಲಿಯೂ ಏರಿಳಿತ ಉಂಟಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ ಮೂರು ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ.
ಕರ್ನಾಟಕದ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ 1.6 ಡಿಗ್ರಿ ಸೆಲ್ಸಿಯಸ್ನಿಂದ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಕ್ಷಿಣ ಕರ್ನಾಟಕದ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ ಗಮನಾರ್ಹವಾಗಿ 3.1 ಡಿಗ್ರಿ ಸೆಲ್ಸಿಯಸ್ನಿಂದ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯವಾಗಿತ್ತು. ಫೆಬ್ರವರಿ 19 ಹಾಗೂ ಮುಂದಿನ ಮೂರು ದಿನಗಳ ಅವಧಿಗೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಹವಾಮಾನ ಹೇಗೆ ಇರಲಿದೆ ಎನ್ನುವ ವಿವರ ಇಲ್ಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರ್ನಾಟಕದ ವಿವಿಧ ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಆಗಲಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಆಂತರಿಕ ಕರ್ನಾಟಕದ ಕೊಪ್ಪಳ, ವಿಜಯಪುರ, ಗದಗ, ರಾಯಚೂರು, ಹಾವೇರಿ ಮತ್ತು ಕಲಬುರಗಿ ಮತ್ತು ಬೆಂಗಳೂರು ಕೆಐಎಎಚ್ ವಿಮಾನ ನಿಲ್ದಾಣ, ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣ, ಚಿತ್ರದುರ್ಗ, ಬೆಂಗಳೂರು ನಗರ, ಮಂಡ್ಯ ಎಡಬ್ಲ್ಯೂಎಸ್, ಮೈಸೂರು ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ ಎಡಬ್ಲ್ಯೂಎಸ್ ಭಾಗದಲ್ಲಿ ಗರಿಷ್ಠ ತಾಪಮಾನವು 16.8 ಡಿಗ್ರಿ ಸೆಲ್ಸಿಯಸ್ ಹಾಗೂ 20.2 ಡಿಗ್ರಿ ಸೆಲ್ಸಿಯಸ್ ಕರಾವಳಿ ಕರ್ನಾಟಕದ ಹೊನ್ನಾವರ, ಕಾರವಾರ, ಮಂಗಳೂರು ಹಾಗೂ ಶಕ್ತಿ ನಗರದಲ್ಲಿ 20.8 ಡಿಗ್ರಿ ಸೆಲ್ಸಿಯಸ್ನಿಂದ 23.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.





