ಗದಗ, ಜ. 27: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಇದೀಗ 10ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಕೆಲ ಪ್ರಾಚ್ಯಾವಶೇಷಗಳು ಪತ್ತೆ ಆಗಿವೆ. ಈ ಮಧ್ಯೆ ಉತ್ಖನನ ಕಾರ್ಯ ಅಪಾಯದ ಹಂತ ತಲುಪಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಜೀವದ ಹಂಗು ತೊರೆದು ಸಿಬ್ಬಂದಿಗಳು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಕ್ಸ್ನಲ್ಲಿ ಬಿರುಕು: ಮಣ್ಣು ಕುಸಿಯುವ ಆತಂಕ
ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಕಳೆದ 10 ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ 10×10 ಅಳತೆಯ ನಾಲ್ಕು ಬಾಕ್ಸ್ಗಳಲ್ಲಿ ಉತ್ಖನನ ನಡೆಯುತ್ತಿದ್ದು, 10 ಅಡಿ ಆಳ ತೆಗೆದಿರುವುದರಿಂದ A-1 ಬಾಕ್ಸ್ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ಮಣ್ಣು ಕುಸಿಯುವ ಆತಂಕ ಸಿಬ್ಬಂದಿಗಳನ್ನು ಕಾಡುತ್ತಿದೆ. ಇನ್ನು B-1 ಬ್ಲಾಕ್ನಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿದ್ದು, ಕಲ್ಲು ಬೀಳುವ ಭೀತಿ ಉಂಟಾಗಿದೆ. A-ಬ್ಲಾಕ್ನಲ್ಲಿ ಬಂಡೆಗಳ ಸಮೂಹ ಇರುವುದರಿಂದ ಉತ್ಖನನ ಕಾರ್ಯಕ್ಕೆ ತೀವ್ರ ತೊಂದರೆ ಎದುರಾಗಿದೆ. ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಅಪಾಯಕಾರಿ ಪರಿಸ್ಥಿತಿಗಳ ನಡುವೆ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಉತ್ಖನ ಬಗ್ಗೆ ಮಾಜಿ ಸಚಿವ ಎಸ್ ಎಸ್ ಪಾಟೀಲ್ ಅಪಸ್ವರ
ಇಂದು ಲಕ್ಕುಂಡಿ ಉತ್ಖನ ಸ್ಥಳಕ್ಕೆ ಮಾಜಿ ಸಚಿವ ಎಸ್ ಎಸ್ ಪಾಟೀಲ್ ಭೇಟಿ ನೀಡಿದ್ದು, ಉತ್ಖನ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮಣ್ಣು ಅಗೆಯುವುದು ಬಿಟ್ಟು ಯಂತ್ರಗಳಿಂದ ಮಣ್ಣು ತೆಗೆಯಬೇಕು. ಭೂಮಿಯಲ್ಲಿನ ಸಂಪತ್ತು ಪತ್ತೆ ಮಾಡುವ ಯಂತ್ರದಿಂದ ಶೋಧ ಮಾಡಬೇಕು ಎಂದಿದ್ದಾರೆ. ಲಕ್ಕುಂಡಿ ಉತ್ಸವ ಮಾಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಲಕ್ಕುಂಡಿ ಉತ್ಸವ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.
ಉತ್ಖನನ ವೇಳೆ ಪತ್ತೆಯಾಗಿದ್ದೇನು?
ಬೆಟಗೇರಿಯಲ್ಲಿ ರಾಷ್ಟ್ರಕೂಟರ ಕಾಲದ ವೀರಗಲ್ಲುಗಳು ಪತ್ತೆ ಆಗಿದ್ದು, ಯುದ್ಧದ ಭೀಕರತೆಯನ್ನ ಸಾರಿ ಸಾರಿ ಹೇಳುತ್ತಿವೆ. ಕಲ್ಲಿನಲ್ಲಿ ಕೆತ್ತನೆ ಮಾಡಿರುವ ಅಪರೂಪದ ಬೃಹತ್ ಆಕಾರದ ವೀರಗಲ್ಲುಗಳು. ಭೂಲೋಕ, ಮಧ್ಯಲೋಕ, ದೇವಲೋಕದ ಕಥೆ ಹೇಳುತ್ತಿವೆ.
9, 10 ನೇ ಶತಮಾನದಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಯುದ್ದಗಳು ಆಗಿರುವ ಕುರುಹುಗಳು ಪತ್ತೆಯಾಗಿವೆ. ಇನ್ನು ಕೋಟೆ ವೀರಭದ್ರೇಶ್ವರ ದೇಗುಲದ ಬಳಿ ಉತ್ಖನನ ಮಾಡುವ ವೇಳೆ ದೇವಕೋಷ್ಠದ ಮೇಲಿನ ಶಿಖರದ ಪ್ರಾಚ್ಯಾವಶೇಷ ಪತ್ತೆ ಆಗಿದೆ.
ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಸದ್ಯ ಉತ್ಖನನ ಜಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಲ್ಕು ಬಾಕ್ಸ್ಗಳ ಮದ್ಯದ ಮಣ್ಣು ತೆರವು ಮಾಡಿ, ಒಂದೇ ಬಾಕ್ಸ್ ಮಾಡಿ, ಉತ್ಖನನ ಮುಂದುವರಿಸಲು ಅಧಿಕಾರಿಗಳು ಪ್ಲ್ಯಾನ್ ಮಾಡಿದ್ದಾರೆ. ಉತ್ಖನನ ವೇಳೆ ಏನೆಲ್ಲಾ ಸಂಪತ್ತು ಸಿಗಲಿದೆ ಎನ್ನುವದು ಕುತೂಹಲ ಮೂಡಿಸಿದೆ.






