ಜಿಲ್ಲೆಯ ಗೋಮಾಳ ಜಮೀನು ಸಂಘಗಳ ಸುಪರ್ದಿಗೆ ಬರಲಿ: ಶಾಸಕ ಹರೀಶ್ ಪೂಂಜ
ಅಂಡಿಂಜೆ: ಪಶುಗಳಿಗೆ ಮೇಯಲೆಂದೇ ಮೀಸರಿಸಿದ ದ.ಕ. ಜಿಲ್ಲೆಯಲ್ಲಿರುವ ಗೋಮಾಳ ಜಮೀನುಗಳನ್ನು ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಪರ್ದಿಗೆ ನೀಡುವಂತಾಗಬೇಕು. ಈ ಮೂಲಕ ನಿಜವಾದ ಹೈನುಗಾರರಿಗೆ ಇದರ ಪ್ರಯೋಜನ ಲಭಿಸಬೇಕು. ಈ ಬಗ್ಗೆ ನಾನು ಹಾಲು ಒಕ್ಕೂಟದ ಜೊತೆ ಸೇರಿ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅಂಡಿಂಜೆ ಹಾಲು ಉತ್ಪಾದಕರ ಸಹಕಾರ ಸಂಘ ಸಂಪರ್ಕದ ನೂತನ ಕಾಂಕ್ರಿಟ್ ರಸ್ತೆ ಹಾಗೂ ನೂತನ ಕಟ್ಟಡ ಕ್ಷೀರ ಸಮೃದ್ಧಿ ಇದರ ಕಚೇರಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕರು ಬ್ಯಾಂಕ್ ಸ್ಥಾಪನೆಯಾಗಲಿ
ಮಂಗಳೂರು ಕೆಎಂಎಫ್ ಮೂಲಕ ವಿವಿಧ ತಳಿಗಳ ಕರುಗಳನ್ನು ಸಾಕಿ ಹೈನುಗಾರರ ಬೇಡಿಕೆಗೆಗನುಗುಣವಾಗಿ ಸಂಘಗಳಿಗೆ ಮಾರಾಟ ಮಾಡುವ ವ್ಯವಸ್ಥೆ ಕರು ಬ್ಯಾಂಕ್ ಸ್ಥಾಪನೆಗೆ ಕೆಎಂಎಫ್ ಮುಂದಾಗಬೇಕು, ಇದು ಹೈನುಗಾರರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.
ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಅವರು ಸಂಘದ ನೂತನ ಕಟ್ಟಡ ಕ್ಷೀರ ಸಮೃದ್ಧಿ ಇದರ ಉದ್ಘಾಟನೆ ನೆರವೇರಿಸಿ, ಶುಭ ಹಾರೈಸಿದರು.
ಒಕ್ಕೂಟದ ಉಪಾಧ್ಯಕ್ಷರಾದ ಉದಯ ಕೋಟ್ಯಾನ್ ಗೋದಾಮು ಕಟ್ಟಡದ ಉದ್ಘಾಟನೆ, ನಿರ್ದೇಶಕ ಸುಧಾಕರ ಶೆಟ್ಟಿ ನಾಮಫಲಕದ ಉದ್ಘಾಟನೆ ನೆರವೇರಿಸಿದರು.
ಅಂಡಿಂಜೆ ಹಾಲು ಉ.ಸ.ಸಂಘದ ಅಧ್ಯಕ್ಷ ಮೋಹನ ಅಂಡಿಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಘದ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸಿದ ಮಾಜಿ ಅಧ್ಯಕ್ಷರುಗಳನ್ನು ಶ್ಲಾಘಿಸಿದರು. ಸಂಘದ ಸಂಪರ್ಕ ರಸ್ತೆಯ ಕಾಂಕ್ರಿಟ್ಗೆ ಅನುದಾನ ಒದಗಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ದ.ಕ.ಸ. ಹಾಲು ಒಕ್ಕೂಟದ ನಿರ್ದೇಶಕರುಗಳಾದ ಪ್ರಭಾಕರ ಹೆಚ್. ಹುಲಿಮೇರು, ಚಂದ್ರಶೇಖರ ರಾವ್, ಭರತ್ ನೆಕ್ರಾಜೆ, ವ್ಯವಸ್ಥಾಪಕರುಗಳಾದ ವಿವೇಕ್ ಡಿ., ಡಾ. ರವಿರಾಜ ಉಡುಪ, ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ಅಧಿಕಾರಿ ಮಹಾಬಲ ಕುಲಾಲ್, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ನಿತಿನ್ ಅಂಡಿಂಜೆ, ನಾರಾವಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಎನ್. ಸುಧಾಕರ ಭಂಡಾರಿ, ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ಮಾಜಿ ನಿರ್ದೇಶಕ ಪದ್ಮನಾಭ ಅರ್ಕಜೆ, ಅಂಡಿಂಜೆ ಸಂಘದ ಉಪಾಧ್ಯಕ್ಷ ರತ್ನಕುಮಾರ್ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಪವಿತ್ರಾ ಬಿ., ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಸನ್ಮಾನ
ಸಂಘದ ಸಂಪರ್ಕ ರಸ್ತೆ ಕಾಂಕ್ರಿಟ್ಗೆ ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ, ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಓಂಕಾರ್ ಪ್ರಾರ್ಥಿಸಿದರು. ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.






