ಮಂಗಳೂರು, ಫೆ. 3: ಕೌಟುಂಬಿಕ ಕಲಹಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತೂಮಿನಾಡಿನಲ್ಲಿ ನಡೆದಿದೆ. ಜುಮೈಲ(18) ಮತ್ತು ಶೇಕುಂಞ (55) ಮೃತ ದುರ್ದೈವಿಗಳಾಗಿದ್ದು, ಆರೋಪಿ ಉಮರ್ ಫಾರೂಕ್ನ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜಗಳ ಬಿಡಿಸಲು ಹೋದ ಜುಮೈಲ ಮೊದಲು ಮೃತ ಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಶೇಕುಂಞ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಫಾರೂಕ್ ಹಾಗೂ ಪತ್ನಿ ತಾಹಿರ ನಡುವೆ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದ್ದು, ಫಾರೂಕ್ನ ನಾದಿನಿ ಮನೆಯಲ್ಲಿ ಪತ್ನಿ ತಾಹಿತ ಮತ್ತು ಪುತ್ರಿ ಜುಮೈಲ ವಾಸವಿದ್ದರು. ಕೌಟುಂಬಿಕ ಕಲಹ ತಾರಕಕ್ಕೇರಿ ವಿಚ್ಛೇದನದ ಮಾತುಕತೆ ಕೂಡ ನಡೆದಿತ್ತು. ಈ ವೇಳೆ ತನ್ನ ಹೆಸರಿಗೆ ಆಸ್ತಿ ಮಾಡಿಕೊಡುವಂತೆ ಫಾರೂಕ್ ಬೇಡಿಕೆ ಇಟ್ಟಿದ್ದ. ಇದೇ ವಿಚಾರವಾಗಿ ನಿನ್ನೆ ಉಮ್ಮರ್ ಮತ್ತು ಆತನ ಬಾವ ಶೇಕುಂಞ ನಡುವೆ ಜಗಳ ಆರಂಭವಾಗಿದ್ದು, ಅದು ವಿಕೋಪಕ್ಕೆ ಹೋದಾಗ ಜಗಳ ಬಿಡಿಸಲು ಹೋದ ಜುಮೈಲಾಗೆ ಕತ್ತಿ ತಗುಲಿದೆ. ಗಾಯಗೊಂಡ ಆಕೆ ಮೃತಪಟ್ಟಿದ್ದಾಳೆ.
ಇನ್ನು ಆರೋಪಿ ಉಮ್ಮರ್ ಫಾರೂಖ್ ಕೆಲ ತಿಂಗಳ ಹಿಂದಷ್ಟೇ ವಿದೇಶದಿಂದ ಬಂದಿರುವ ಮಾಹಿತಿ ಇದ್ದು, ಆತ ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಎಂದು ಕೂಡ ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಕಸ್ಟಡಿಗೆ ಪಡೆದಿರುವ ಮಂಜೇಶ್ವರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿ ಉಮ್ಮರ್ ಫಾರೂಖ್ಗೆ ತಕ್ಕ ಶಿಕ್ಷೆಯಾಗಬೇಕೆಂಬ ಆಗ್ರಹ ಕೇಳಿಬಂದಿದೆ.






